ಕರ್ನಾಟಕ

ಅವೈಜ್ಞಾನಿಕ ವಲಯ ವಿಂಗಡಣೆ ವಿರೋಧಿಸಿ ಬಿಬಿಎಂಪಿಗೆ ಮುತ್ತಿಗೆ

Pinterest LinkedIn Tumblr

BBMP-1ಬೆಂಗಳೂರು, ಏ. ೨೭ – ಬಿಬಿಎಂಪಿ ಬೊಕ್ಕಸವನ್ನು ತುಂಬಿಸಿಕೊಳ್ಳಲು ತಂದಿರುವ ೨೦೧೬-೧೭ನೇ ಸಾಲಿನ ಆಸ್ತಿ ತೆರಿಗೆಯ ಅವೈಜ್ಞಾನಿಕ ವಲಯ ವಿಂಗಡಣೆಯನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಪಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಬಿಎಂಪಿ ಮುತ್ತಿಗೆ ಹಾಕಲು ಬಿಜೆಪಿ ಮೇ ೩ ರಂದು ನಿರ್ಧರಿಸಿದೆ.
ಅಂದು ಎಲ್ಲಾ ೨೮ ವಿಧಾನಸಭಾ ಕ್ಷೇತ್ರಗಳಿಂದಲೂ ತಲಾ ೧ ಸಾವಿರ ಪಕ್ಷದ ಕಾರ್ಯಕರ್ತರು ಬಿಬಿಎಂಪಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಶಾಸಕರಾದ ಎಸ್. ಸುರೇಶ್ ಕುಮಾರ್, ಬಿ.ಎನ್. ವಿಜಯಕುಮಾರ್, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಆಗ್ರಹಪಡಿಸಿದರು.
ಸರ್ಕಾರ ಮತ್ತು ಬಿಬಿಎಂಪಿ ತಂದಿರುವ ಶೇ. ೨೦ (ವಸತಿ), ಶೇ. ೨೫ (ವಸತಿಯೇತರ) ಆಸ್ತಿ ತೆರಿಗೆಯನ್ನು ಮುಂದುವರೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಅವೈಜ್ಞಾನಿಕ ವಲಯ ವಿಂಗಡಣೆಯಿಂದಾಗಿ ಬಡ ಆಸ್ತಿದಾರರು ದುಪ್ಪಟ್ಟು ತೆರಿಗೆಯನ್ನು ಕಟ್ಟುವಂತಾಗಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕವಾದ ವಲಯಾವಾರು ವಿಂಗಡಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾದವನ್ನೇ ಎಸಗಿದೆ. ೨೦೦೮ ರಿಂದ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿಲ್ಲ ಎಂಬ ನೆಪವನ್ನಿಟ್ಟುಕೊಂಡು ಅವೈಜ್ಞಾನಿಕ ವಲಯಾವಾರು ಪದ್ಧತಿಯನ್ನು ವಾಪಸ್ ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ತಾನು ಮಾಡಿದ್ದೇ ಕಾನೂನು ಎಂಬಂತೆ ತೊಗಲಕ್ ದರ್ಬಾರು ನಡೆಸುತ್ತಿದೆ ಎಂದ ಸುರೇಶ್ ಕುಮಾರ್ ಅವರು, ಇದು ರಾಜಕೀಯ ಹೋರಾಟವಲ್ಲ, ಜನರ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರಾಮಾಣಿಕ ಹೋರಾಟ ಎಂದು ಹೇಳಿದರು.
ಯಾವ ಮಾನದಂಡದ ಆಧಾರದ ಮೇಲೆ ವಲಯಾವಾರು ವರ್ಗೀಕರಣ ಮಾಡಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಮಹಾಲಕ್ಷ್ಮಿಪುರಂನಲ್ಲಿ ಅಶೋಕಪುರ ಸ್ಲಂ ಎಫ್ ಝೋನ್‌ನಲ್ಲಿರಬೇಕು ಆದರೆ, ಡಿಝೋನ್‌ಗೆ ತರಲಾಗಿದೆ. ಇದರಿಂದ ಆ ಭಾಗದ ನಾಗರಿಕರು ಹೆಚ್ಚು ತೆರಿಗೆಯನ್ನು ಕಟ್ಟಬೇಕಾಗಿದೆ ಎಂದು ಆರೋಪಿಸಿದರು.
ಶೇ. ೨೦ ರಷ್ಟು ವಸತಿ ಹಾಗೂ ಶೇ. ೨೫ ರಷ್ಟು ವಸತಿಯೇತರ ಕಟ್ಟಡಗಳಿಗೆ ಕಟ್ಟುವ ಹಣ ಕೆಲವೆಡೆ ೨೦೦ ಇದ್ದರೆ ಇನ್ನೂ ಕೆಲವೆಡೆ ಶೇ. ೪೦೦ರಷ್ಟು ಹೆಚ್ಚಳವಾಗಿದೆ ಎಂದು ಆಪಾದಿಸಿದರು.
ಏ. ೩೦ ರೊಳಗೆ ಕಟ್ಟಿದರೆ ಶೇ. ೫ ರಷ್ಟು ಹಣ ಕಡಿತಗೊಳಸಲಾಗುವುದು ಎಂದು ಬಿಬಿಎಂಪಿ ಹೇಳಿದೆ. ಆದರೆ, ಕೆನರಾ ಬ್ಯಾಂಕ್‌ನಲ್ಲಿ ಕಟ್ಟಲು ಇಂದಿಗೂ ಆಸ್ತಿದಾರರಿಗೆ ಆಗುತ್ತಿಲ್ಲ ಎಂದು ಆಪಾದಿಸಿದ ಅವರು, ಈ ತೆರಿಗೆ ವಿನಾಯಿತಿಯನ್ನು ಜೂನ್ ೩೦ರವರೆಗೆ ವಿಸ್ತರಿಸಬೇಕು ಎಂದು ಆಗ್ರಹಪಡಿಸಿದರು.
ಕಳೆದ ವರ್ಷ ಇದೇ ತೆರಿಗೆ ವಿನಾಯಿತಿಯನ್ನು ಬಳಸಿಕೊಂಡು ಏ. ಮೇ ತಿಂಗಳಲ್ಲಿ ೧೫೦೦ ಕೋಟಿ ರೂ. ಸಂಗ್ರಹಿಸಲಾಗಿತ್ತು. ಆದರೆ, ಅವ್ಯವಸ್ಥೆಯ ಗೊಂದಲದಿಂದ ಈ ಬಾರಿ ಇದೇ ಅವಧಿಯಲ್ಲಿ ೧೨೭ ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ ಎಂದರು.
೨೦೦೮ ರಲ್ಲಿ ತರಲಾಗಿದ್ದ ಆಸ್ತಿ ತೆರಿಗೆಯ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಹೋರಾತ್ರಿ ಧರಣಿ – ಪದ್ಮನಾಭರೆಡ್ಡಿ ಎಚ್ಚರಿಕೆ
ಅವೈಜ್ಞಾನಿಕ ವಲಯಾವಾರು ಪದ್ಧತಿಯನ್ನು ರದ್ದುಪಡಿಸದಿದ್ದರೆ ಇದೇ ತಿಂಗಳ ೨೯ ರಂದು ನಡೆಯಲಿರುವ ಪಾಲಿಕೆ ಸಭೆಯನ್ನು ಸುಗಮವಾಗಿ ನಡೆಸಲು ಬಿಡುವುದಿಲ್ಲ. ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಎಸ್.ಕೆ. ನಟರಾಜ್, ಸತ್ಯನಾರಾಯಣ, ವೆಂಕಟೇಶ್ ಮೂರ್ತಿ, ಮಾಜಿ ಉಪ ಮೇಯರ್ ಎಸ್. ಹರೀಶ್, ಶಿವಕುಮಾರ್ ಉಪಸ್ಥಿತರಿದ್ದರು.

Write A Comment