ರಾಷ್ಟ್ರೀಯ

ಪರೀಕ್ಷಾ ಕೇಂದ್ರದಲ್ಲೇ ಅಚ್ಚರಿಯ ಫ‌ಲಿತಾಂಶ: ಮಗು ಹೆತ್ತ ವಿದ್ಯಾರ್ಥಿನಿ

Pinterest LinkedIn Tumblr

Pregnant-woman-700ರಾಂಚಿ : ಜಾರ್ಖಂಡ್‌ನ‌ ಗಿರೀಧ್‌ ಜಿಲ್ಲೆಯ ಪದವಿ ಪರೀಕ್ಷಾ ಕೇಂದ್ರದಲ್ಲಿ 21ರ ಹರೆಯದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.

ಧನ್ವರ್‌ನ ಅದರಾಹ್‌ ಎಂಬಲ್ಲಿನ ಸರಿಯಾ ಕಾಲೇಜಿನ 3ನೇ ಬಿಎ ವಿದ್ಯಾರ್ಥಿನಿಯಾಗಿರುವ ಭಾರತಿ ಕುಮಾರಿ ಪರೀಕ್ಷಾ ಕೇಂದ್ರದಲ್ಲೇ ಮಗುವಿಗೆ ಜನ್ಮ ನೀಡಿದಾಕೆ.

ಭಾರತಿ ಕುಮಾರಿಯ ಮನೆ ಪರೀಕ್ಷಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರವಿದೆ. ಈಕೆ ಬಿರ್ನಿ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಒಳಪಡುವ ಜಿತ್‌ಕುಂದಿ ಗ್ರಾಮದ ನಿವಾಸಿ. ಪರೀಕ್ಷಾ ಕೇಂದ್ರವನ್ನು ಹೊತ್ತಿಗೆ ಮೊದಲೇ ಸುರಕ್ಷಿತವಾಗಿ ತಲುಪಲೆಂದು ಆಕೆ ಎರಡು ತಾಸು ಮೊದಲೇ ಮನೆ ಬಿಟ್ಟಿದ್ದಳು. ಆದರೆ ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಆಕೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ಪರೀಕ್ಷಾ ಕೇಂದ್ರ ತಲುಪಬೇಕಾಯಿತು.

ಪರೀಕ್ಷೆ ಆರಂಭವಾಗುವುದಕ್ಕೆ ಎರಡು ನಿಮಿಷ ಮೊದಲೇ ಕೇಂದ್ರವನ್ನು ಆಕೆ ತಲುಪಿದಾಗ ಎಲ್ಲವೂ ಸರಿಯಾಗಿತ್ತು. ಆದರೆ ಪರೀಕ್ಷೆ ಆರಂಭಗೊಂಡು ಅರ್ಧ ತಾಸು ಕಳೆಯುವಷ್ಟರಲ್ಲಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಶಾಲೆಯ ಅಧಿಕಾರಿಗಳು ಕೂಡಲೇ ಸಮೀಪದ ನರ್ಸಿಂಗ್‌ ಹೋಮ್‌ನಿಂದ ವೈದ್ಯಕೀಯ ತಂಡವನ್ನು ಕೇಂದ್ರಕ್ಕೆ ಕರೆಸಿಕೊಂಡರು. ಆದರೆ ಆ ತಂಡ ಪರೀಕ್ಷಾ ಕೇಂದ್ರವನ್ನು ತಲುಪುವ ಮುನ್ನವೇ ಭಾರತಿ ಕುಮಾರಿ ಮಗುವನ್ನು ಹೆತ್ತಳು.

ಹೆರಿಗೆಯಾದೊಡನೆಯೇ ತಾಯಿ ಮತ್ತು ಮಗುವನ್ನು ಅಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ನರ್ಸಿಂಗ್‌ ಹೋಮ್‌ ಗೆ ಒಯ್ಯಲಾಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿರುವುದು ಖಚಿತವಾದ ಬಳಿಕ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಪರೀಕ್ಷಾ ಕೇಂದ್ರದಲ್ಲೇ ಮಗವನ್ನು ಹೆತ್ತರೂ ತಾಯಿ ಮಗು ಇಬ್ಬರೂ ಸುರಕ್ಷಿತವಾಗಿರುವುದು ದೇವರ ದಯೆ ಎಂದು ಪರೀಕ್ಷಾ ಕೇಂದ್ರದ ಸುಪರಿಂಟೆಂಡೆಂಟ್‌ ಅರುಣ್‌ ಕುಮಾರ್‌ ಹೇಳಿದರು.

ಈ ದಿಢೀರ್‌ ಹೆರಿಗೆ ಪ್ರಕರಣದಿಂದಾಗಿ ಪರೀಕ್ಷಾ ಕೇಂದ್ರದಲ್ಲಿ ಸ್ವಲ್ಪ ಹೊತ್ತು ವಿದ್ಯಾರ್ಥಿಗಳ ಗಮನ ಬಾಧಿತವಾಯಿತಾದರೂ ಆ ಬಳಿಕ ಪರೀಕ್ಷೆ ಸುಗಮವಾಗಿ ನಡೆಯಿತೆಂದು ಅರುಣ್‌ ಕುಮಾರ್‌ ಹೇಳಿದರು.
-ಉದಯವಾಣಿ

Write A Comment