ಮನೋರಂಜನೆ

ಅಭಿಮಾನಿಗಳಿಗೆ ಪವರ್‌ ಪ್ಯಾಕ್ಡ್ ಸಿನಿಮಾ

Pinterest LinkedIn Tumblr

2_1ಪುನೀತ್‌ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ “ಚಕ್ರವ್ಯೂಹ’ ಚಿತ್ರ, ಏಪ್ರಿಲ್‌ 29 ರಂದು ಬಿಡುಗಡೆಯಾಗುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ “ಚಕ್ರವ್ಯೂಹ’ ಬಿಡುಗಡೆಯಾಗಲಿದೆ. ಶರವಣನ್‌ ಈ ಚಿತ್ರದ ನಿರ್ದೇಶಕರು. ಲೋಹಿತ್‌ ನಿರ್ಮಾಪಕರು. ಚಕ್ರವ್ಯೂಹ ಚಿತ್ರವನ್ನು ನಿರ್ಮಿಸಿರುವ ಲೋಹಿತ್‌ ಮಾಜಿ ಸಚಿವ ರಘುಪತಿ ಅವರ ಮೊಮ್ಮಗ. ಇದು ಇವರಿಗೆ ಮೊದಲ ಚಿತ್ರ. ಪುನೀತ್‌ ರಾಜ್‌ ಕುಮಾರ್‌ಗೆ ಇಲ್ಲಿ ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ “ಚಕ್ರವ್ಯೂಹ’ ಚಿತ್ರದ ಮೇಲೆ ಎಲ್ಲರಿಗೂ ಕುತೂಹಲವಿದೆ. ಚಿತ್ರ ಅಂದುಕೊಂಡಂತೆಯೇ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ “ಚಕ್ರವ್ಯೂಹ’ ಚಿತ್ರದ ಬಗ್ಗೆ ಒಂದಷ್ಟು.

ಚಕ್ರವ್ಯೂಹ ಗೆಲ್ಲುವ ವಿಶ್ವಾಸ
“ಪುನೀತ್‌ ರಾಜ್‌ಕುಮಾರ್‌ ಅಭಿನಯಿಸಿರುವ “ಚಕ್ರವ್ಯೂಹ’ ನಿರ್ಮಾಪಕ ಲೋಹಿತ್‌ ಅವರ ಮೊದಲ ನಿರ್ಮಾಣದ ಚಿತ್ರ. ಅವರು ಪುನೀತ್‌ ರಾಜ್‌ಕುಮಾರ್‌ ಅವರ ಪಕ್ಕಾ ಅಭಿಮಾನಿ. ಅಷ್ಟೇ ಅಲ್ಲ, ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆಸೆ ಮೊದಲಿನಿಂದಲೂ ಇತ್ತಂತೆ.

ಅವರೇನಾದರೂ ಸಿನಿಮಾ ಮಾಡುವುದಾದರೆ, ಅದು ಪುನೀತ್‌ ಅವರ ಸಿನಿಮಾ ಮಾಡಬೇಕು ಎಂಬ ಉದ್ದೇಶ ಅವರಿಗಿತ್ತು. ಅದಕ್ಕಾಗಿಯೇ ಅವರು ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದರಂತೆ. ನಿರ್ದೇಶಕ ಶರವಣನ್‌ ಅವರು ಹೆಣೆದ ಕಥೆ ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಎನಿಸಿದ್ದೇ ತಡ, ಲೋಹಿತ್‌ ಅವರು, ಆ ಚಿತ್ರ ಮಾಡಲು ಮುಂದಾಗಿ, ಅದು “ಚಕ್ರವ್ಯೂಹ’ ಮೂಲಕ ಅವರಿಗೆ ಒಳ್ಳೆಯ ಚಿತ್ರ ಮಾಡಿದ ಆಸೆ ಈಡೇರಿದೆಯಂತೆ. ಸಾಮಾನ್ಯವಾಗಿ ಸ್ಟಾರ್‌ ಸಿನಿಮಾ ಅಂದಮೇಲೆ ಬಿಗ್‌ಬಜೆಟ್‌ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಲೋಹಿತ್‌ ಅವರಿಗೆ ಒಳ್ಳೆಯ ಸಿನಿಮಾ ಆಗಬೇಕು ಎಂಬ ಆಸೆ ಇದ್ದುದರಿಂದಲೇ ಅವರು, ಬಜೆಟ್‌ ಗೆ ಯಾವುದೇ ಚೌಕಟ್ಟು ಹಾಕಿಕೊಳ್ಳದೆ ಒಂದು ದೊಡ್ಡ ಬಜೆಟ್‌ನ ಸಿನಿಮಾ ಮಾಡಿದ್ದಾರಂತೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವುದರಿಂದ ಹಾಗೂ ಚಿತ್ರ ಚೆನ್ನಾಗಿ ಮೂಡಿ ಬಂದಿರುವುದರಿಂದ ಅವರಿಗೆ ತಾನು ಮೊದಲ ಚಿತ್ರದಲ್ಲೇ ಸಕ್ಸಸ್‌ ಕಾಣುತ್ತೇನೆ ಎಂಬ ವಿಶ್ವಾಸವಿದೆ.

ನಿರ್ದೇಶಕ ಶರವಣನ್‌ ಅವರ ನಿರ್ದೇಶನದ ಈ ಚಿತ್ರ ರಿಮೇಕ್‌ ಆಗಿರಬಹುದಾ ಎಂಬ ಪ್ರಶ್ನೆಗಳಿವೆ. ಆದರೆ, ಚಿತ್ರತಂಡದವರು ಮಾತ್ರ ಅದು ರಿಮೇಕ್‌ ಅಥವಾ ಸ್ವಮೇಕ್‌ ಎಂಬುದನ್ನು ಇದುವರೆಗೂ ಸ್ಪಷ್ಟಪಡಿಸಿಲ್ಲ. ತಮಿಳಿನ ನಿರ್ದೇಶಕರು ಆಗಿರುವುದರಿಂದ ಇದು ರಿಮೇಕ್‌ ಚಿತ್ರವಾಗಿರಬಹುದೇ ಎಂಬ ಮಾತುಗಳು ಕೇಳಿಬರುತ್ತವಾದರೂ, “ಚಕ್ರವ್ಯೂಹ’ ಚಿತ್ರ ತೆರೆಗೆ ಬಂದ ಬಳಿಕವಷ್ಟೇ ಅದರ ಬಗ್ಗೆ ಗೊತ್ತಾಗಲಿದೆ. ಶರವಣನ್‌ ಅವರನ್ನೇ ಲೋಹಿತ್‌ ಆಯ್ಕೆ ಮಾಡಲು ಬಲವಾದ ಕಾರಣವೂ ಇದೆ. ಯಾಕೆಂದರೆ, ಅವರಿಗೆ ಮೊದಲು ಕಥೆ ಇಷ್ಟವಾಗಬೇಕಿತ್ತು. ಆ ಬಳಿಕ ನಿರ್ದೇಶಕರ ಕೆಲಸ ಇಷ್ಟವಾಗಬೇಕಿತ್ತು. ನಿರ್ದೇಶಕ ಶರವಣನ್‌ ಅವರು ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್‌ ಅವರ ಶಿಷ್ಯ. ಈಗಾಗಲೇ ಅವರ ನಿರ್ದೇಶನ “ಎಂಗೆಯಂ ಎಪ್ಪುದಂ’ ಎಂಬ ಯಶಸ್ವಿ ಚಿತ್ರ ಕೊಟ್ಟವರು. ಹಾಗಾಗಿ ಅವರ ಮೇಲೆ ನಂಬಿಕೆ ಇಟ್ಟು, ನಿರ್ಮಾಪಕ ಲೋಹಿತ್‌ ಸಿನಿಮಾ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಯಶಸ್ವಿಯಾಗಿಯೂ ಪೂರೈಸಿದ್ದಾರಂತೆ. ಇನ್ನು, “ಚಕ್ರವ್ಯೂಹ’ ಚಿತ್ರದ ಹೈಲೈಟ್‌ ಅಂದರೆ, ಅದು ಕಥೆಯಂತೆ. ಪುನೀತ್‌ ರಾಜ್‌ಕುಮಾರ್‌ಗೆ ಆ ಕಥೆಯ ಪಾತ್ರ ಸರಿಯಾಗಿ ಹೊಂದಿಕೆಯಾಗುತ್ತೆ ಎಂಬ ಕಾರಣಕ್ಕೆ ಅವರ ಬಳಿ ಹೋಗಿ ಕಥೆ , ಪಾತ್ರದ ಬಗ್ಗೆ ಹೇಳಿದಾಗ, ಒಪ್ಪಿ ಪ್ರೀತಿಯಿಂದ ಮಾಡಿದ್ದಾರಂತೆ.

ಇಲ್ಲಿ ಕಥೆಯೇ ಹೀರೋ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಚಿತ್ರ ಅಂದಮೇಲೆ, ಅಲ್ಲಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅಷ್ಟೇ ಅಲ್ಲ, ಪಾತ್ರಕ್ಕೂ ಹೆಚ್ಚಿನ ಮೌಲ್ಯವಿರುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಆ್ಯಕ್ಷನ್‌ಗೆ ಒತ್ತು ಕೊಡಲೇಬೇಕು. ಅಂಥಹ ಎಲ್ಲಾ ಅಂಶಗಳೂ “ಚಕ್ರವ್ಯೂಹ’ ಚಿತ್ರದಲ್ಲಿವೆಯಂತೆ. ಇನ್ನು, ಚಿತ್ರದ ಮತ್ತೂಂದು ವಿಶೇಷವೆಂದರೆ, ಅದು ಒಂದು ನೈಜ ಘಟನೆ ಇಟ್ಟುಕೊಂಡು ಹೆಣೆದಿರುವಂತಹ ಕಥೆಯಂತೆ.

ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಜರ್ನಿಯಲ್ಲಿ ಇದೊಂದು ಹೊಸಬಗೆಯ ಚಿತ್ರ ಎಂಬುದು ಚಿತ್ರತಂಡದ ಮಾತು. ಸಮಾಜದ ಒಳಿತಿಗೆ ಹಾಗು ಒಳ್ಳೆಯ ಉದ್ದೇಶಕ್ಕಾಗಿ ಹೋರಾಟ ನಡೆಸುವಂತಹ ಪಾತ್ರದಲ್ಲಿ ಪುನೀತ್‌ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇನ್ನು ಆ್ಯಕ್ಷನ್‌ ವಿಷಯಕ್ಕೆ ಬಂದರೆ, ಇಲ್ಲಿ ಸಿಲ್ವ ಅವರು ಸಖತ್‌ ಸ್ಟಂಟ್ಸ್‌ ಮಾಡಿಸಿದ್ದಾರಂತೆ. ತಮಿಳಿನ ಅನೇಕ ಸ್ಟಾರ್ ಸಿನಿಮಾಗಳಿಗೆ ಸ್ಟಂಟ್‌ ಮಾಸ್ಟರ್‌ ಆಗಿರುವ ಸಿಲ್ವ, ಚಿತ್ರಕ್ಕೆ ಆರು ಭರ್ಜರಿ ಫೈಟ್ಸ್‌ಗಳನ್ನು ಮಾಡಿಸಿದ್ದಾರಂತೆ. ಪುನೀತ್‌ ಅಭಿಮಾನಿಗಳಿಗೆ ಆ್ಯಕ್ಷನ್‌ ತುಂಬಾ ಇಷ್ಟವಾಗುತ್ತೆ ಎಂಬುದು ಚಿತ್ರತಂಡದ ಹೇಳಿಕೆ.

ಇನ್ನು, ಈ ಪವರ್‌ಫ‌ುಲ್‌ ಚಿತ್ರಕ್ಕೆ ಎಸ್‌.ಎಸ್‌.ತಮನ್‌ ಅವರು ಐದು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಚಂದನ್‌ಶೆಟ್ಟಿ ಮತ್ತು ಕವಿರಾಜ್‌ ಗೀತೆಗಳನ್ನು ರಚಿಸಿದ್ದಾರೆ.

ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಶಣ್ಮುಗ ಸುಂದರಂ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು, “ಗಬ್ಬರ್‌ಸಿಂಗ್‌’ ಚಿತ್ರದ ವಿಲನ್‌ ಅಭಿಮನ್ಯು ಸಿಂಗ್‌ ಮತ್ತು ತಮಿಳಿನ ಖ್ಯಾತ ನಟ ಅರುಣ್‌ ವಿಜಯ್‌ ನಟಿಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಲೇಬೇಕು. ಅರುಣ್‌ ವಿಜಯ್‌ ಅವರು ಈಗಾಗಲೇ ಹೀರೋ ಆಗಿದ್ದವರು. ಅಜಿತ್‌ ಸಿನಿಮಾದಲ್ಲಿ ವಿಲನ್‌ ಕೂಡ ಆಗಿ ಗಮನಸೆಳೆದಿದ್ದಾರೆ. ಅಂತಹ ಅರುಣ್‌ವಿಜಯ್‌ಗೆ ಕನ್ನಡದ ಮೊದಲ ಚಿತ್ರ ಇದು ಎಂಬುದು ಮತ್ತೂಂದು ವಿಶೇಷ.
-ಉದಯವಾಣಿ

Write A Comment