ಕರ್ನಾಟಕ

ಇದು ಯಶೋಮಾರ್ಗ…ಬರದ ನಾಡಿನ ಜನರ ನೆರವಿಗೆ ನಿಂತ ನಟ ಯಶ್

Pinterest LinkedIn Tumblr

Yashಬೆಂಗಳೂರು: ಇತ್ತೀಚೆಗೆ ತಮಿಳುನಾಡಿನಲ್ಲಿ ಸುರಿದ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಅದಕ್ಕಾಗಿ ಚಿತ್ರ ನಟರು ನೆರವಿನ ಹಸ್ತ ನೀಡಿರುವುದನ್ನು ಓದಿದ್ದೀರಿ.. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿಯೂ ನೆರವಿನ ಹಸ್ತ ನೀಡುತ್ತಿರುವ ಸುದ್ದಿಯ ಬಗ್ಗೆಯೂ ಕೇಳಿದ್ದೀರಿ. ಇದೀಗ ಬರಗಾಲದಿಂದ ತತ್ತರಿಸಿ ಹೋಗಿರುವ ಉತ್ತರಕರ್ನಾಟಕ ಜನರ ನೆರವಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ.

ಹೌದು ಬರದ ನಾಡಿನ ಜನರ ಕುಡಿಯುವ ನೀರಿನ ಬವಣೆಯನ್ನು ತಣಿಸಲು ‘ಯಶೋಮಾರ್ಗ’ ಮುಂದಾಗಿದ್ದು, ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸಲು ಯೋಜಿಸಿದೆ. ಗುಲಬರ್ಗಾ ಜಿಲ್ಲೆಯ 25 ಹಳ್ಳಿಗಳಿಗೆ ನೀರು ಪೂರೈಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲಿಯೇ ಬಿಜಾಪುರ ಜಿಲ್ಲೆಯ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಪ್ರಾರಂಭವಾಗಲಿದೆ ಎಂದು ಯಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಯಶೋಮಾರ್ಗದ ಬಗ್ಗೆ ಯಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡ ಪೂರ್ಣ ಬರಹ ಇಲ್ಲಿದೆ….

ಬದುಕು ನಿನಗೆ ಕೊಟ್ಟದ್ದನ್ನು
ನೀನು ಬದುಕಿಗೆ ಮರಳಿಸು
ಮೋಡ ಮಳೆಯಾಗಿ
ಮರವು ನೆರಳಾಗಿ
ಪೈರು ಅನ್ನವಾಗಿ
ಕಬ್ಬು ಸಿಹಿಯಾಗಿ
ಈ ಭೂಮಿ ತನಗೆ ಕೊಟ್ಟದ್ದನ್ನು
ಮತ್ತೆ ಮರಳಿಸುತ್ತದೆ.
ನನಗೂ ಇದೇ ದಾರಿಯಲ್ಲಿ ನಡೆಯುವ ಆಸೆ. ಮೈಸೂರಿನ ಬಡ ಕುಟುಂಬದ ಹುಡುಗ ನಾನು. ಕಲೆಯನ್ನು ನಂಬಿ ಬಂದವನನ್ನು ನೀವು ಕೈ ಹಿಡಿದಿರಿ. ಮಡಿಲು ತುಂಬಿದಿರಿ. ಸಂತೋಷ ಕೊಟ್ಟಿರಿ. ಅದನ್ನೀಗ ನಾನು ಮರಳಿಸಲು ಹೊರಟಿದ್ದೇನೆ. ಅದು ನನ್ನ ಕರ್ತವ್ಯ ಕೂಡ. ನಾನಿದನ್ನು ಹೆಮ್ಮೆಯಿಂದಲೋ ಅಹಂಕಾರದಿಂದಲೋ ಹೇಳಿಕೊಳ್ಳುತ್ತಿಲ್ಲ. ಪ್ರಕೃತಿ ನನಗೆ ಕಲಿಸಿದ ವಿನಯದ ಪಾಠವನ್ನು ನಾನು ಮರೆಯಲಾರೆ. ನನಗೆ ದೊರೆತದ್ದನ್ನು ಸಂಕಷ್ಟದಲ್ಲಿರುವವರಿಗೆ, ನಾನು ಪಡೆದದ್ದನ್ನು ನೋವಲ್ಲಿರುವವರಿಗೆ, ನಿಮ್ಮಿಂದ ನಾನು ಗಳಿಸಿದ್ದನ್ನು ಮರಳಿ ನಿಮಗೆ ಕೊಡಲು ಪಣ ತೊಟ್ಟು ನಿಂತಿದ್ದೇನೆ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಿಮ್ಮ ಮನೆ ಮಗ ಎಂಬ ಪ್ರೀತಿ ನನ್ನನ್ನು ಕಾಯುತ್ತಿರಲಿ.

ನನ್ನ ಕಣ್ಮುಂದೆಯೇ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲುವುದನ್ನು, ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುವುದನ್ನು, ಬಿಸಿಲ ಬೇಗೆಯಲ್ಲಿ ಒಣಗುವುದನ್ನು ನಾನು ನೋಡಿದ್ದೇನೆ. ಅವರ ಕಷ್ಟಗಳನ್ನು ನೀಗಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಸಹೃದಯರು ಶ್ರಮಿಸುತ್ತಿದ್ದಾರೆ. ಅದು ಕೇವಲ ಸರ್ಕಾರದ ಕರ್ತವ್ಯ ಅಂತ ಕೈ ಕಟ್ಟಿ ಕೂರುವುದು ಸರಿ ಅಂತ ನನಗೇಕೋ ಅನ್ನಿಸುತ್ತಿಲ್ಲ. ಹೀಗಾಗಿ ನನ್ನ ಕೈಲಾದ್ದನ್ನು ಮಾಡುವುದಕ್ಕೆ ಮುಂದಾಗಿದ್ದೇನೆ. ವ್ಯವಸ್ಥೆಯನ್ನು ದೂರುವುದು ಸುಲಭ. ಯಾರ ಕಡೆಗೋ ಬೆರಳು ತೋರಿಸಿ, ನೀವೇನು ಮಾಡಿದ್ದೀರಿ ಎಂದು ಕೇಳುವ ಮೊದಲು, ನಾನೇನು ಮಾಡಿದ್ದೇನೆ ಎಂದು ನನ್ನನ್ನು ಕೇಳಿಕೊಳ್ಳುವುದು ಮಾನವೀಯತೆ. ಅದು ನಮ್ಮ ಹಿರಿಯರು ನನಗೆ ಕಲಿಸಿದ ಪಾಠ. ಅವರ ಮಾರ್ಗದರ್ಶನ, ಆಶೀರ್ವಾದ ಮತ್ತು ಹಾರೈಕೆಯೊಂದಿಗೆ ನಾನು ನನ್ನ ಪುಟ್ಟ ಕೈಗಳಿಂದ ಏನನ್ನಾದರೂ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೇನೆ. ಅದರ ಫಲವಾಗಿಯೇ ಹುಟ್ಟಿಕೊಂಡದ್ದು ಯಶೋಮಾರ್ಗ ಫೌಂಡೇಶನ್.

ಇದು ನೆರವಿಗಾಗಿ ಕಣ್ತೆರೆದಿರುವ ಸಂಸ್ಥೆ. ಗ್ರಾಮೀಣ ಪ್ರದೇಶದ ರೈತಾಪಿ ಜನ, ಕೂಲಿ ಕಾರ್ಮಿಕರು, ಬಿಸಿಲುಮಳೆಚಳಿಯೆನ್ನದೇ ದುಡಿದರೂ ಮೂರು ಹೊತ್ತಿನ ಊಟ ದಕ್ಕಿಸಿಕೊಳ್ಳಲಾಗದವರು ಸಾಕಷ್ಟು ಮಂದಿ ಇದ್ದಾರೆ. ಅವರು ನೆಮ್ಮದಿಯಿಂದ ಬಾಳುವುದಕ್ಕೆ ಈ ಸಂಸ್ಥೆ ನೆರವಾಗಲಿದೆ. ಇದು ನನ್ನೊಬ್ಬನಿಂದ ಆಗುವ ಕೆಲಸವಲ್ಲ. ಹನಿಗೂಡಿ ಹಳ್ಳ ಎಂಬಂತೆ ಮನಗೂಡಿದಾಗ ಮನೆ ಬೆಳಗುವುದು ಕಷ್ಟವೇನಲ್ಲ. ಬನ್ನಿ, ಯಶೋಮಾರ್ಗದೊಂದಿಗೆ ಮುಂದೆ ಸಾಗೋಣ. ಉದ್ಯಮದ ಮಿತ್ರರು, ನೆರವಾಗಲು ಮನಸ್ಸಿದ್ದರೂ ಮಾರ್ಗ ಯಾವುದು ಎಂದು ಗೊತ್ತಿಲ್ಲದವರು, ಕಷ್ಟಕ್ಕೆ ಮಿಡಿವವರು ಎಲ್ಲರೂ ಒಂದಾಗೋಣ. ನಮ್ಮ ಕೈಲಾಗಿದ್ದನ್ನು ಮಾಡೋಣ. ಕಲೆಯ ಮೂಲಕ ಸಂತೋಷ ಹಂಚುತ್ತಾ, ಸೇವೆಯ ಮೂಲಕ ಸಂತೋಷ ಕಂಡುಕೊಳ್ಳೋಣ.

ಮೊದಲನಯ ಹೆಜ್ಜೆ :
1972 ರ ನಂತರ ರಾಜ್ಯಕ್ಕೆ ಭೀಕರ ಬರಗಾಲ ಎದುರಾಗಿದ್ದು, ಕರ್ನಾಟಕದ 12 ಜಿಲ್ಲೆಗಳ ಜನರು ಬರಗಾಲದ ಭೀಕರತೆಗೆ ತತ್ತರಿಸಿ ಹೋಗಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರದ ನಾಡಿನ ಜನರ ಕುಡಿಯುವ ನೀರಿನ ಬವಣೆಯನ್ನು ತಣಿಸಲು ‘ಯಶೋಮಾರ್ಗ’ ಮುಂದಾಗಿದ್ದು, ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸಲು ಯೋಜಿಸಿದೆ. ಗುಲಬರ್ಗಾ ಜಿಲ್ಲೆಯ 25 ಹಳ್ಳಿಗಳಿಗೆ ನೀರು ಪೂರೈಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲಿಯೇ ಬಿಜಾಪುರ ಜಿಲ್ಲೆಯ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಪ್ರಾರಂಭವಾಗಲಿದೆ

ಬನ್ನಿ, ನೆರವಾಗೋಣ.
ಯಶೋಮಾರ್ಗ ಫೌಂಡೇಶನ್
ಚೊಕ್ಕ ಮನಸ್ಸು, ಚಿಕ್ಕ ಮಾರ್ಗ
-ಉದಯವಾಣಿ

Write A Comment