ಕರ್ನಾಟಕ

ಅಧಿಕಾರಿ – ಬ್ರೋಕರ್ ಜೋಡಿಗೆ ಭರ್ಜರಿ ಸುಗ್ಗಿ

Pinterest LinkedIn Tumblr

Siddaramaiah_0ಲಕ್ಷ್ಮೀಶ್ವರ(ಗದಗ), ಏ. ೨೭- ಬರ ಅಧಿಕಾರಿಗಳಿಗೆ ಸುಗ್ಗಿ ಕಾಲದಂತಾಗಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಬರ ಹೆಸರಿನಲ್ಲಿ ಭರಪೂರ ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಬರದಿಂದ ಕಂಗೆಟ್ಟಿರುವ ಜನರ ಸಂಕಷ್ಟ ದೂರವಾಗಿಲ್ಲ. ಕೂಲಿ ಹಣವನ್ನು ನೀಡದೇ ಅಧಿಕಾರಿಗಳು ಸತಾಯಿಸುತ್ತಿರುವ ಕರಾಳ ಸತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರಿಗೆ ಬಿಚ್ಚಿಡಲಾಯಿತು.
ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಇಂದು ಶಿವಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ವೀಕ್ಷಣೆಗೆ ಬಂದಾಗ ಅವರನ್ನು ಸುತ್ತುವರಿದ ಜನ ಮೈಮುರಿದು ದುಡಿದ ಹಣ ಕೈಗೆ ಸಿಗುತ್ತಿಲ್ಲ. ಕೂಲಿ ಹಣ ಕೊಡಿಸಿ ಎಂದು ದುಂಬಾಲುಬಿದ್ದರು.
ದುಡಿದವರಿಗೆ ಹಣ ಕೊಡುತ್ತಿಲ್ಲ. ಹೀಗಾದರೆ ನಮ್ಮ ಗತಿ ಏನು? ಹೊಟ್ಟೆಗೆ ಬಟ್ಟೆಗೆ ಏನು ಮಾಡಬೇಕು ಹೇಳಿ ಎಂಬ ಜನರ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿ ವಿರುದ್ಧ ಗರಂ ಆದರು. ಮಧ್ಯಾಹ್ನದ ವೇಳೆಗೆ ಕೂಲಿ ಹಣ ಕೊಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರಾದರೂ ಜನರು ಮಾತ್ರ ಅದನ್ನು ನಂಬಬೇಕೋ, ಬೇಡವೋ ಎಂಬ ಆಯೋಮಯ ಸ್ಥಿತಿ.
ಕಾರಿನಲ್ಲೇ ಕುಳಿತು ಕೆರೆ ಕಾಮಗಾರಿ ಪರಿಶೀಲಿಸಲು ಮುಂದಾದ ಮುಖ್ಯಮಂತ್ರಿ ನಡೆ ರೈತರ ಆಕ್ರೋಶಕ್ಕೆ ಕಾರಣವಾಯಿತು. ಕಾರಿನಿಂದ ಇಳಿದು ಕೆರೆ ಕಾಮಗಾರಿ ನೋಡಿ. ಹೀಗಾದರೆ ನಮ್ಮನ್ನು ಯಾರು ಕಾಪಾಡುವುದು. ಅಧಿಕಾರಿಗಳು ಹೇಳಿದ್ದೆ ಸತ್ಯವಲ್ಲ ಎಂಬ ಬಿರುನುಡಿಗಳನ್ನು ಮುಖ್ಯಮಂತ್ರಿಗಳು ಕೇಳಬೇಕಾಯಿತು. ಕೊನೆಗೂ ಕಾರಿನಿಂದ ಕೆಳಗಿಳಿದ ಮುಖ್ಯಮಂತ್ರಿ ಕೆರೆಗೂ ಇಳಿಯಬೇಕಾಯಿತು.
ಇದು ಕೇವಲ ಮಾಗಡಿ ಕೆರೆ ಸುತ್ತಲಿನ ಗ್ರಾಮದ ಜನರ ಬವಣೆ ಇಲ್ಲಿ ಬಹುತೇಕ ರಾಜ್ಯದ ಎಲ್ಲೆಡೆ ಇದೇ ಪರಿಸ್ಥಿತಿ.
ಮನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ ಒಂದು ವಾರದ ಒಳಗೆ ಕೋಟಿ ಹಣ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ಅಧಿಕಾರಿಗಳು ಲೆಕ್ಕಕ್ಕೂ ಇಟ್ಟಿಲ್ಲ. ಬರದಿಂದ ಕಷ್ಟದಲ್ಲಿರುವವರಿಗೆ ಸರಿಯಾದ ಸಮಯಕ್ಕೆ ಹಣ ಸಿಗುತ್ತಿಲ್ಲ. ಹೀಗಾದರೆ ಬದುಕು ಹೇಗೆ ಎಂಬ ಪ್ರಶ್ನೆ ಸಂಕಷ್ಟದಲ್ಲಿರುವ ಜನರ ಪ್ರಶ್ನೆಗೆ ಉತ್ತರ ಹೇಳದ ಸ್ಥಿತಿ ಅಧಿಕಾರಸ್ಥರದ್ದಾಗಿದೆ.
ಬರ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಜನರಿಗೆ ದುಡ್ಡೆ ಸಿಗುತ್ತಿಲ್ಲ. ಹೀಗಾದರೆ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ತುಂಬುತ್ತಿದೆ ಎಂಬುದು ಚಿಂದಬರ ರಹಸ್ಯವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಅಧ್ಯಯನ ಪ್ರವಾಸ ನ‌ಡೆಸಿದ ಕಡೆಯಲ್ಲಿ ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಏನೇ ಆದರೂ ಅಧಿಕಾರಿಗಳು ಮಾತ್ರ ಬರದ ಹೆಸರಿನ ಸುಗ್ಗಿಕಾಲವನ್ನು ಆನಂದಿಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳ್ಲಿಲ ಸಚಿವರು ಪರಿಶೀಲನೆಗೆ ಬಂದಾಗ ಕಾಟಾಚಾರಕ್ಕೆ ಕಾಮಗಾರಿಗಳನ್ನು ಕೈಗೆತ್ತಿಕೊಂ‌ಂಡಿರುವ `ನಾಟಕ’ಗಳನ್ನು ಅಧಿಕಾರಿಗಳು ನಡೆಸಿರುವುದು ಬೆಳಕಿಗೆ ಬಂದಿದೆ. ಹಳೆಯ ಕಾಮಗಾರಿಗೆ ಹೊಸ ಕಾಮಗಾರಿಗಳ ಲೇಬಲ್ ಅಂಟಿಸುವ ಕಾರ್ಯಗಳು ಯಥೇಚ್ಚವಾಗಿ ನ‌ಡೆದಿವೆ.
ಕುಡಿಯುವ ನೀರಿನ ಕೊರತೆಯನ್ನು ಬಂಡವಾಳವಾಗಿಸಿಕೊಂಡು ಟ್ಯಾಂಕರಲ್ಲಿ ನೀರು ಪೂರೈಕೆ ಹೆಸರಿನಲ್ಲಿ ಲೂಟಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲೂ ಶಾಸಕರುಗಳು ಪ್ರಸ್ತಾಪಿಸಿ ನಡೆಯುತ್ತಿರುವ ವ್ಯವಹಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆ.
ಏನೇ ಆಗಲಿ ಬರ ಬರಲಿ, ಅತಿವೃಷ್ಠಿಯಾಗಲಿ ಅಧಿಕಾರಿಗಳಿಗೆ, ಅಧಿಕಾರಸ್ಥರಿಗೆ ಸದಾ ಸುಗ್ಗಿಕಾಲ ಎಂಬುದು ಅತಿಶಯೋಕ್ತಿಯಲ್ಲ. ವಾಸ್ತವಕ್ಕೆ ಹಿಡಿದ ಕೈಗನ್ನಡಿ.

Write A Comment