ಬೆಂಗಳೂರು, ಏ.26- ಡಾರ್ಜಿಲಿಂಗ್ಗೆ ತನ್ನನ್ನು ಕರೆದೊಯ್ಯುತ್ತಿಲ್ಲವೆಂದು ನೊಂದ ಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೆಹಲಿ ಮೂಲದ ಆವ್ರಾರ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂಲತಃ ಡಾರ್ಜಿಲಿಂಗ್ ಪ್ರಜೆಯಾದ ಶಾಂತಾ (28) ಎಂಬಾಕೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ನಂತರ ಆವ್ರಾರ್ ಮತ್ತು ಶಾಂತಾ ಪ್ರೇಮ ವಿವಾಹವಾಗಿ ಬನಶಂಕರಿ 9ನೆ ಮುಖ್ಯರಸ್ತೆ, 1ನೆ ಕ್ರಾಸ್, ಕಾವೇರಿ ನಗರದ ಶೀಟ್ ಮನೆಯಲ್ಲಿ ವಾಸವಾಗಿದ್ದರು.
ಆವ್ರಾರ್ ಪೈಂಟರ್ ಹಾಗೂ ಸೆಲೂನ್ನಲ್ಲೂ ಕೆಲಸ ಮಾಡುತ್ತಿದ್ದರು. ಶಾಂತಾ ಬ್ಯೂಟಿಪಾರ್ಲರ್ಗೆ ಹೋಗುತ್ತಿದ್ದರು. ಇತ್ತೀಚೆಗೆ ಶಾಂತಾ ಡಾರ್ಜಿಲಿಂಗ್ಗೆ ಹೋಗಿ ಬರುವುದಾಗಿ ಆವ್ರಾರ್ಗೆ ತಿಳಿಸಿದಾಗ, ಪತಿ ತಾನೂ ಬರುವುದಾಗಿ ಹೇಳಿದ್ದಾನೆ. ಇದಕ್ಕೊಪ್ಪದ ಶಾಂತಾ ತಾನೊಬ್ಬಳೇ ಹೋಗುವುದಾಗಿ ತಿಳಿಸಿದ್ದರಿಂದ ಇವರಿಬ್ಬರ ಮಧ್ಯೆ ಜಗಳವಾಗಿ ಮನಸ್ತಾಪವಾಗಿದೆ. ಇದರಿಂದ ನೊಂದಿದ್ದ ಅವ್ರಾರ್ ರೂಂಗೆ ಹೋಗಿ ಕಬ್ಬಿಣದ ಹುಕ್ಕಿಗೆ ವೇಲ್ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಷ್ಟು ಹೊತ್ತಾದರೂ ರೂಮ್ನಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಶಾಂತಾ ಬಾಗಿಲು ತಳ್ಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪತ್ನಿ ಶಾಂತಾಳೇ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.