ಕನ್ನಡ ವಾರ್ತೆಗಳು

ಉಳ್ಳಾಲದಲ್ಲಿ ದುಷ್ಕರ್ಮಿಗಳ ಅಟ್ಟಹಾಸ : ಕಾನೂನು ಸುವ್ಯವಸ್ಥೆಗಾಗಿ ಪೊಲೀಸರಿಂದ ಪಥಸಂಚಲ

Pinterest LinkedIn Tumblr

Ullala_Police_March_1

ಮಂಗಳೂರು /ಉಳ್ಳಾಲ, ಎಪ್ರಿಲ್.26 : ಉಳ್ಳಾಲದಲ್ಲಿ ಸೋಮವಾರ ಬೆಳಗ್ಗೆ ಚೂರಿ ಇರಿತ ಸಂಭವಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಅಬ್ಬಕ್ಕ ಸರ್ಕಲ್‌ನಿಂದ ಮೊಗವೀರಪಟ್ಣ ಮಾರ್ಗವಾಗಿ ಪೊಲೀಸ್ ಪಥಸಂಚಲನ ನಡೆಯಿತು.  ಕೆಎಸ್‌ಆರ್‌ಪಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

Ullala_Police_March_2 Ullala_Police_March_3

ದುಷ್ಕರ್ಮಿಗಳಿಂದ ಮಾರಕಾಯುಧಗಳಿಂದ ಹಲ್ಲೆ :

ಸೋಮವಾರ ಬೆಳಗ್ಗಿನ ವೇಳೆ ಕೋಟೆಪುರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಇಬ್ರಾಹೀಂ ನಶ್ಮಾನ್ (29) ಮೀನಿನ ವ್ಯಾಪಾರಕ್ಕೆಂದು ದಕ್ಕೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಅವರು ಬಸ್ತಿಪಡ್ಪುತಲುಪುತ್ತಿದ್ದಂತೆ ಆರು ಮಂದಿ ಯುವಕರಿದ್ದ ತಂಡ ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಇದರಿಂದ ಯುವಕನ ಕೈ, ಮುಖ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ಮಾಹಿತಿ ಪಡೆದ ಗಸ್ತು ನಿರತ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆರು ಮಂದಿ ಆರೋಪಿಗಳು ಮಾರಕಾಯುಧಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹೀಂ ನಶ್ಮಾನ್‌ರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆ ನಡೆದ ರಾಜು ಕೋಟ್ಯಾನ್ ಕೊಲೆಗೆ ಪ್ರತಿಯಾಗಿ ತಂಡ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Ullala_Police_March_4 Ullala_Police_March_5

ಸೋಮವಾರ ಮತ್ತೆ ಮರುಕಳಿಸಿದ ದುಷ್ಕರ್ಮಿಗಳ ಅಟ್ಟಹಾಸ :

ಉಳ್ಳಾಲದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಸೋಮವಾರ ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಲಾರು ನಿವಾಸಿ ಸಫ್ವಾನ್ (20) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್(19), ಸಲೀಂ(24) ಸ್ವಲ್ಪ ಗಾಯಗೊಂಡು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿದ್ದ ಬೈಕಿನತ್ತ ತಲವಾರು ಬೀಸಿ ಹತ್ಯೆಗೆ ಯತ್ನಿಸಿದ್ದರು.

ಈ ವೇಳೆ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಹಾಗೂ ಹಿಂಬದಿ ಕುಳಿತಿದ್ದ ಸಲೀಂ ಇಬ್ಬರೂ ದಾಳಿಯಿಂದ ತಪ್ಪಿಸಿಕೊಂಡರೆ ನಡುವೆ ಕುಳಿತಿದ್ದ ಸಫ್ವಾನ್ ಮೇಲೆ ತಂಡ ತಲವಾರಿನಿಂದ ಹೊಟ್ಟೆಭಾಗಕ್ಕೆ ಹಲ್ಲೆ ನಡೆಸಿದೆ. ಆದರೂ ತಿವಿದ ಹೊಟ್ಟೆಯ ಭಾಗವನ್ನು ಕೈಯಲ್ಲೇ ಹಿಡಿದುಕೊಂಡ ಸಫ್ವಾನ್ ಒಂದು ಕಿ.ಮೀ. ದೂರದ ಕಾಪಿಕಾಡು ವರೆಗೂ ಓಡಿ ತಪ್ಪಿಸಿಕೊಂಡು, ಅಲ್ಲಿಂದ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಡರಾತ್ರಿಯಾದರೂ ಗೆಳೆಯನ ಕರೆಗೆ ಸ್ಪಂಧಿಸಿದ ಸಮದ್ ಮತ್ತು ನಝ್ರತ್ ಎಂಬವರು ಕೂಡಲೇ ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಾಳಿಗೊಳಗಾದ ನಿಝಾಂ ಬೆಳಗ್ಗಿನವರೆಗೂ ನಾಪತ್ತೆಯಾಗಿದ್ದು, ಪೊಲೀಸರು ಸಹಿತ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಬೆಳಗ್ಗಿನ ವೇಳೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದ ನಿಝಾಂ ತಾನು ಹೆದರಿ ಕಾಪಿಕಾಡು ಸಮೀಪ ಪೊದೆಯೊಂದರಲ್ಲಿ ಮೂರು ಗಂಟೆಯವರೆಗೂ ಅವಿತು ಕುಳಿತಿರುವ ವಿಚಾರವನ್ನು ತಿಳಿಸಿದ್ದಾರೆ.

ಆರೋಪಿಗಳ ಚಿತ್ರ ಸಿಸಿಟಿವಿಯಲ್ಲಿ ಸೆರೆ :

ಘಟನೆ ನಡೆದ ಸ್ಥಳದಲ್ಲಿ ಇರುವ ಬ್ಯಾಂಕಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಚಿತ್ರ ಸೆರೆಯಾಗಿದೆ. ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ಹಾಗೂ ಕಪ್ಪು ಬಣ್ಣದ ಬೈಕಿನಲ್ಲಿ ಬಂದಿರುವ ದುಷ್ಕರ್ಮಿಗಳು ತಲವಾರಿನ ಮೂಲಕ ಕೃತ್ಯ ಎಸಗಿದ್ದು, ಆರೋಪಿಗಳೆಲ್ಲರೂ ತೊಕ್ಕೊಟ್ಟು ಕೃಷ್ಣನಗರ ಹಾಗೂ ಗಣೇಶನಗರ ನಿವಾಸಿಗಳೆಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

Write A Comment