ಕರ್ನಾಟಕ

ಸಿಐಡಿ ಎಸ್‌ಪಿ ಗುಳುಂ

Pinterest LinkedIn Tumblr

policeಬೆಂಗಳೂರು,ಏ.೨೬-ವೇಶ್ಯಾವಾಟಿಕೆ ದಂಧೆಯ ನೆಪ ಮಾಡಿ ಖಾಸಗಿ ಹೊಟೇಲ್ ಮೇಲೆ ನಕಲಿ ದಾಳಿ ನಡೆಸಿ ಹಣ ವಸೂಲಿ ಮಾಡಿರುವ ಎಸ್‌ಪಿ ಮಧುರಾ ವೀಣಾ ಪ್ರಕರಣದ ವರದಿ ನೀಡುವಂತೆ ಸಿಐಡಿಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ರಿಗೆ ರಾಜ್ಯಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ಸೂಚನೆ ನೀಡಿದ್ದಾರೆ.
ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಪತ್ರ ಬರೆದಿರುವ ಓಂಪ್ರಕಾಶ್ ಅವರು ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.ಶಿವಾಜಿನಗರದ ರಮಾಂಡ ಹೋಟೆಲ್ ಮೇಲೆ ಕಳೆದ ಮಾರ್ಚ್ ೩ರಂದು ಸಿಐಡಿ ಎಸ್‌ಪಿ ಮಧುರಾ ವೀಣಾ ಅವರು ವೇಶ್ಯಾವಾಟಿಕೆ ದಂಧೆಯ ನೆಪ ಮಾಡಿ ದಾಳಿ ನಡೆಸಿ ೨ ಲಕ್ಷ ರೂಗಳನ್ನು ವಸೂಲಿ ಮಾಡಿದ್ದರು.
ಮಧುರಾ ವೀಣಾ ಅವರು ನಕಲಿ ದಾಳಿ ಮಾಡಿ ಹಣವನ್ನ ವಸೂಲಿ ಮಾಡಲಾಗಿದೆ ಎಂದು ಹೋಟೆಲ್‌ನ ಆಡಳಿತ ಮಂಡಳಿ ಸಿಐಡಿಗೆ ದೂರು ನೀಡಿ ಎಸ್‌ಪಿ ಮಧುರ ವೀಣಾ ಹಣ ಪಡೆಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನ ಕೂಡ ಸಲ್ಲಿಸಿತ್ತು.ಇದನ್ನು ಪರಿಶೀಲಿಸಿದ ಡಿಐಜಿ ಸೋನಿಯಾನಾರಂಗ್ ಅವರು ವೀಣಾ ಅವರ ಹಣ ವಸೂಲಿಯ ವರದಿಯನ್ನು ಡಿಜಿಪಿ ಕಿಶೋರ್‌ಚಂದ್ರ ಅವರಿಗೆ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.ಪ್ರಕರಣ ಓಂಪ್ರಕಾಶ್ ಅವರಿಗೆ ತಲುಪಿ ಅವರು ವರದಿ ನೀಡುವಂತೆ ಕಿಶೋರ್ ಚಂದ್ರ ಅವರಿಗೆ ಸೂಚನೆ ನೀಡಿದ್ದಾರೆ.
ಘಟನೆಯ ವಿವರ
ವೇಶ್ಯಾವಾಟಿಕೆ ನಡೆಯುತ್ತಿರುವ ನೆಪ ಮಾಡಿ ಶಿವಾಜಿನಗರದ ರಮಾಡ ಹೋಟೆಲ್ ಮೇಲೆ ಮಾರ್ಚ್ ೩ರಂದು ಮಧ್ಯಾಹ್ನ ೨:೩೦ಕ್ಕೆ ಮಧುರಾ ವೀಣಾ ನೇತೃತ್ವದಲ್ಲಿ ಸಿಐಡಿ ತಂಡ ದಾಳಿ ನಡೆಸಿ ಸರ್ಚ್ ವಾರೆಂಟ್ ಇಲ್ಲದಿದ್ದರೂ ಕಾರ್ಯಾಚರಣೆಗಿಳಿದು ರೂಮ್ ನಂಬರ್ ೩೦೬ಕ್ಕೆ ದಾಳಿ ಮಾಡಲು ಮುಂದಾಯಿತು.
ಹೋಟೆಲ್ ಸಿಬ್ಬಂದಿ ವೇಶ್ಯಾವಾಟಿಕೆ ಚಟುವಟಿಕೆ ನಡೆಯುತ್ತಿಲ್ಲ. ರೂಮಿನಲ್ಲಿರುವುದು ಇಬ್ಬರು ಅಮಾಯಕ ಹುಡುಗಿಯರಷ್ಟೇ ಎಂದು ಸೂಕ್ತ ದಾಖಲೆಗಳನ್ನು ತೋರಿಸಿದರೂ ಕಿವಿಗೊಡದೆ ತಂಡ ದಾಳಿಗೆ ಮುಂದಾಯಿತು.ಹೋಟೆಲ್’ನ ೩೦೬ನೇ ಕೊಠಡಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದು ಇಬ್ಬರು ಯುವತಿರು ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಯಾವ ಕುರುಹೂ ಸಿಗಲಿಲ್ಲ. ಆ ಇಬ್ಬರು ಆನ್’ಲೈನ್’ನಲ್ಲಿ ಆ ರೂಮನ್ನು ಬುಕ್ ಮಾಡಿಕೊಂಡು ಬಂದಿದ್ದರು.
ಇಷ್ಟಾದ ಮೇಲೆ ವೀಣಾ ನೇತೃತ್ವದ ೧೨ ಸಿಐಡಿ ಪೊಲೀಸರ ತಂಡ ವಾಪಸ್ ಹೋಗಬೇಕಿತ್ತು. ಆದರೆ, ಹೋಟೆಲ್ ಮೇಲೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ೫ ಲಕ್ಷ ಹಣದ ಬೇಡಿಕೆ ಮುಂದಿಟ್ಟರು. ಮಾತುಕತೆ ಸಂಜೆ ೫:೩೦ರವರೆಗೆ ನಡೆಯಿತು.ಹೋಟೆಲ್‌ನವರು ೨೫ ಸಾವಿರ ರೂ ಕೊಡುವುದಾಗಿ ಹೇಳಿದರು.ಇದಕ್ಕೆ ಒಪ್ಪದ
ಮಧುರಾ ವೀಣಾ ಅವರು ತಮ್ಮ ಹಿರಿಯ ಸಹೋದ್ಯೋಗಿ ಸೋನಿಯಾ ನಾರಂಗ್ ಅವರಿಗೆ ಫೋನ್ ಮಾಡಿ ದಾಳಿಯ ವಿವರ ನೀಡಿದರು.
ದಾಳಿಯಲ್ಲಿ ವೇಶ್ಯಾವಾಟಿಕೆಯ ಚಟುವಟಿಕೆ ಪತ್ತೆಯಾಗದಿದ್ದರೆ ವಾಪಸ್ ಬರಬೇಕೆಂದು ನಾರಂಗ್ ಸೂಚಿಸಿದರು ಆದರೂ ಇಬ್ಬರು ಡಿವೈಎಸ್’ಪಿ ಮಟ್ಟದ ಅಧಿಕಾರಿಗಳನ್ನು ಸ್ಥಳದಲ್ಲಿ ಬಿಟ್ಟು ವೀಣಾ ಅವರು ೮ ಸಿಬ್ಬಂದಿಯೊಂದಿಗೆ ಹೋಟೆಲ್‌ನಿಂದ ನಿರ್ಗಮಿಸಿದರು.
ಅಲ್ಲೇ ಉಳಿದ ಇಬ್ಬರು ಡಿವೈಎಸ್‌ಪಿ ಅಧಿಕಾರಿಗಳು ವ್ಯವಹಾರದ ಮಾತುಕತೆ ಮುಂದುವರಿಸಿ ಎಸ್‌ಪಿ ಮಟ್ಟದ ಅಧಿಕಾರಿ ದಾಳಿ ಮಾಡಿದ್ದರಿಂದ ಹಣ ಕೊಡಬೇಕೆಂದು ಒತ್ತಾಯಿಸಿದರು ಅಲ್ಲದೆ, ಅವರಲ್ಲೊಬ್ಬ ತಾನು ಸಿಬಿಐಗೆ ಕೆಲಸ ಮಾಡುತ್ತಿರುವುದಾಗಿಯೂ ಹೆದರಿಸಿದ್ದಾರೆ. ರಮಾಡ ಹೋಟೆಲ್‌ನವರು ಅಂತಿಮವಾಗಿ ೨ ಲಕ್ಷ ರೂ ನೀಡಲು ಒಪ್ಪಿದರು. ಇದೆಲ್ಲವೂ ಆಗುವ ಹೊತ್ತಿಗೆ ರಾತ್ರಿ ೮:೩೦ ಸಮೀಪಿಸಿತ್ತು.
ಹೊಟೇಲ್‌ನ ಆಡಳಿತ ಮಂಡಳಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಬಳಿ ವೀಣಾ ಮಧುರಾ ಹಾಗೂ ತಂಡದ ವಿರುದ್ಧ ದೂರು ದಾಖಲಿಸಿದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಡಿಐಜಿ ಸೋನಿಯಾ ನಾರಂಗ್ ಮಾರ್ಚ್ ೩ರ ಮಧ್ಯಾಹ್ನ ೨:೩೦ರಿಂದ ರಾತ್ರಿ ೮:೨೫ರವರೆಗಿನ ಅವಧಿಯಲ್ಲಿ ಹೋಟೆಲ್’ನ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯಗಳೆಲ್ಲವನ್ನೂ ಪರಿಶೀಲಿಸಿದರು. ಇದರಲ್ಲಿ ಪೊಲೀಸರು ಹಣ ವಸೂಲಿ ಮಾಡಿರುವ ಅಂಶ ಸಾಬೀತಾಗಿದೆ. ಬ್ಯಾಂಕ್ ಅಕೌಂಟ್’ವೊಂದರಿಂದ ೨ ಲಕ್ಷ ಹಣ ಡ್ರಾ ಮಾಡಿಕೊಂಡಿರುವುದಕ್ಕೆ ಪುರಾವೆಗಳೂ ಸಿಕ್ಕಿವೆ. ಅಲ್ಲದೇ, ಏನೇ ದೂರು ಬಂದರೂ, ಪ್ರಕರಣ ದಾಖಲಾದರೂ, ಘಟನೆ ನಡೆದರೂ ಪೊಲೀಸರು ಒಂದು ಡೈರಿಯಲ್ಲಿ ದಾಖಲು ಮಾಡಬೇಕು. ಈ ಪ್ರಕ್ರಿಯೆಯಲ್ಲೂ ತಪ್ಪು ಇರುವುದು ತಿಳಿದುಬಂದಿದೆ.
ತನಿಖೆ ಪೂರ್ಣಗೊಳಿಸಿದ ಬಳಿಕ ಸೋನಿಯಾ ನಾರಂಗ್ ತಮ್ಮ ವರದಿಯನ್ನು ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಸಲ್ಲಿಸಿದ್ದಾರೆ. ಹೋಟೆಲ್‌ನವರು ಮಾಡಿರುವ ಆರೋಪಗಳನ್ನು ಈ ವರದಿಯಲ್ಲಿ ಪುರಸ್ಕರಿಸಿರುವುದು ತಿಳಿದುಬಂದಿದೆ.

Write A Comment