ರಾಷ್ಟ್ರೀಯ

2 ವರ್ಷದ ಮಕ್ಕಳಿಗೆ ಕಲಿಸಲು ಟ್ಯಾಬ್‌ಲೆಟ್‌ ಬಳಸುವ ಹೈದರಾಬಾದ್‌ ಶಾಲೆ

Pinterest LinkedIn Tumblr

Hyderabad School-700ಹೈದರಾಬಾದ್‌ : ನೀವು ನಂಬುವಿರೋ ಇಲ್ಲವೋ ಆ ಮಾತು ಬೇರೆ – ಹೈದರಾಬಾದ್‌ನ ಶಾಲೆಗಳು ಎರಡು ವರ್ಷ ಪ್ರಾಯದ ಹಸುಳೆಗಳಿಗೆ ಕಲಿಸಲು ಟ್ಯಾಬ್‌ಲೆಟ್‌ಗಳನ್ನು ಬಳಸಲು ಆರಂಭಿಸಿವೆ.

ಡೆಕ್ಕನ್‌ ಕ್ರಾನಿಕಲ್‌ ವರದಿಯ ಪ್ರಕಾರ ತೆಲಂಗಾಣದ ರಾಜಧಾನಿಯಲ್ಲಿನ ಕೆಲವು ಶಾಲೆಗಳು ಈಗಾಗಲೇ ಎರಡು ವರ್ಷ ಪ್ರಾಯದ ಮಕ್ಕಳಿಗೆ ಕಲಿಸಲು ಟ್ಯಾಬ್‌ಲೆಟ್‌ಗಳನ್ನು ಬಳಸಲು ಆರಂಭಿಸಿವೆ. ಇತರ ಶಾಲೆಗಳು ಈ ವಿಷಯದಲ್ಲಿ ನಾ ಮುಂದು ತಾ ಮುಂದು ಎಂಬಂತೆ ಟ್ಯಾಬ್‌ಲೆಟ್‌ಗಳನ್ನು ಬಳಸುವ ಧಾವಂತದಲ್ಲಿವೆ !

ಆದರೆ ಟ್ಯಾಬ್‌ಲೆಟ್‌ಗಳನ್ನು ಬಳಸುವ ಶಾಲೆಗಳ ಈ ಪರಿಯ ತರಾತುರಿಯನ್ನು ಮಕ್ಕಳ ಹೆತ್ತವರು ವಿರೋಧಿಸುತ್ತಿದ್ದಾರೆ. ಎರಡು ವರ್ಷ ಪ್ರಾಯದ ಮಕ್ಕಳ ದೃಷ್ಟಿ ತುಂಬಾ ಸೂಕ್ಷ್ಮವಿರುವುದರಿಂದ ಟ್ಯಾಬ್‌ಲೆಟ್‌ನಂತಹ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವುದು ಸರಿಯಲ್ಲ; ಮೇಲಾಗಿ ಅಂತಹ ಉಪಕರಣಗಳನ್ನು ಬಳಸುವುದಕ್ಕೆ ಸರಕಾರ ಈಗಿನ್ನೂ ಅನುಮತಿ ನೀಡಿಲ್ಲ ಎಂದವರು ತಮ್ಮ ಅಸಮಾಧಾನ ಮತ್ತು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಸ್‌ಪರೆಂಝಾ ಪ್ರೀ ಸ್ಕೂಲ್‌ ಸಮೂಹಗಳು ಈಗಾಗಲೇ ಮಕ್ಕಳ ಹೆತ್ತವರಿಗೆ ಟ್ಯಾಬ್‌ಲೆಟ್‌ ಖರೀದಿಸುವುದನ್ನು ಕಡ್ಡಾಯ ಮಾಡಿವೆ ಎಂದು ವರದಿಗಳು ಹೇಳಿವೆ. ವಿಶೇಷವೆಂದರೆ ತಮ್ಮ ಶಾಲೆಗಳಲ್ಲಿ ಲಭ್ಯವಿರುವ ಟ್ಯಾಬ್‌ಲೆಟ್‌ಗಳನ್ನು ಮಾತ್ರವೇ ಖರೀದಿಸುವಂತೆ ಅವು ಮಕ್ಕಳ ಹೆತ್ತವರಿಗೆ ತಾಕೀತು ಮಾಡುತ್ತಿವೆ ! ಆದರೆ ಇವುಗಳ ದರ 10,000 ರೂ. ಇದೆ ಮತ್ತು ಇದು ಬಹಳ ಜಾಸ್ತಿಯಾಯಿತು ಎಂದವರು ದೂರುತ್ತಿದ್ದಾರೆ.

ಟ್ಯಾಬ್‌ಲೆಟ್‌ಗಳ ಬಳಕೆಯಿಂದ ಎಳೆಯ ಮಕ್ಕಳ ದೃಷ್ಟಿಗೆ ಹಾಗೂ ಆರೋಗ್ಯಕ್ಕೆ ಹಾನಿಯಾಗುವುದೆಂಬ ಹೆತ್ತವರ ಭೀತಿಗೆ ಡೋಂಟ್‌ ಕೇರ್‌ ಎನ್ನುವ ರೀತಿಯಲ್ಲಿರುವ ಈ ಶಾಲೆಗಳು, ತಮ್ಮಲ್ಲಿ ದೊರಕುತ್ತಿರುವ ಟ್ಯಾಬ್‌ಲೆಟ್‌ಗಳು ಶಿಶುಸ್ನೇಹಿಯಾಗಿವೆ ಎಂದು ಹೇಳಿಕೊಳ್ಳುತ್ತಿವೆ. ಈ ಟ್ಯಾಬ್‌ಲೆಟ್‌ಗಳನ್ನು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ಬಳಸಲಾಗುತ್ತದೆ ಮತ್ತು ವಾರದಲ್ಲಿ ಮೂರು ಪೀರಿಯಡ್‌ಗಳಲ್ಲಿ ಮಾತ್ರವೇ ಅವುಗಳನ್ನು ಉಪಯೋಗಿಸಲಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿಗಳು ಹೇಳುತ್ತಿವೆ.
-ಉದಯವಾಣಿ

Write A Comment