ಬೆಂಗಳೂರು, ಏ. ೨೬ – ಭ್ರಷ್ಟಾಚಾರ ಎಲ್ಲಾ ಪ್ರಕರಣಗಳ ತನಿಖೆಯನ್ನೂ ಲೋಕಾಯುಕ್ತ ಪೊಲೀಸರೇ ಮುಂದುವರೆಸುವಂತೆ ಹೈಕೋರ್ಟ್ ನೀಡಿರುವ ಆದೇಶದಿಂದ ಸರಕಾರ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ವರ್ಗಾಯಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ಎಲ್ಲಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರೇ ಮುಂದುವರೆಸುವಂತೆ ಸೂಚಿಸಿದೆ.
ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಎಸಿಬಿ ರಚಿಸಿದ ಸರಕಾರಕ್ಕೆ ಹೈಕೋರ್ಟ್ ನೀಡಿರುವ ಈ ತೀರ್ಪಿನಿಂದ ಮತ್ತೊಮ್ಮೆ ಮುಖಭಂಗ ಅನುಭಿಸುವಂತಾಗಿದೆ.
ಈ ಮೊದಲು ತನಿಖೆಗೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸರಕಾರ ಪರ ವಕೀಲ ಎಂ.ಆರ್. ನಾಯ್ಕ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಚಿದಾನಂದ ಅರಸು ಅವರು ಸಲ್ಲಿಸಿದ ಪಿಐಎಲ್ನ ವಿಚಾರಣೆಯನ್ನು ಕೈಗೆತ್ತಿಕೊಂಡು ನ್ಯಾಯಾಲಯ ಈ ತೀರ್ಪು ನೀಡಿದೆ ಹಾಗೂ ಬಾಕಿ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಪೊಲೀಸರೇ ಮುಂದುವರೆಸಬೇಕೆಂದು ಸೂಚನೆ ನೀಡಿದೆ.