ಬೆಂಗಳೂರು : ಬಿರು ಬೇಸಗೆಯ ದಿನಗಳಲ್ಲೂ ಬೆಂಗಳೂರು ಏರ್ ಏರ್ ಕಂಡೀಶಂಡ್ ಸಿಟಿ ಆಗಿರುವುದೆಂಬ ಲಾಗಾಯ್ತಿನ ಮಾತು ಇನ್ನು ಕೇವಲ ಇತಿಹಾಸವಾಗಲಿದೆ ! ಕಡು ಬೇಸಗೆಯ ಈ ದಿನಗಳಲ್ಲಿ ಬೆಂಗಳೂರು ಮಹಾನಗರದ ತಾಪಮಾನ ಒಂದೇ ಸಮನೆ ಏರುತ್ತಿದೆ.
ನಿನ್ನೆ ಭಾನುವಾರ ಬೆಂಗಳೂರಿನ ತಾಪಮಾನ 1931ರ ಎಪ್ರಿಲ್ನಲ್ಲಿ ದಾಖಲಾಗಿದ್ದ 38.3 ಡಿಗ್ರಿ ಸೆಲ್ಸಿಯಸ್ ದಾಟಿ 39.2 ಡಿಗ್ರಿ ಸೆಲ್ಸಿಯಸ್ ತಲುಪುವ ಮೂಲಕ ಹೊಸ ಗರಿಷ್ಠ ದಾಖಲೆಯನ್ನು ಕಂಡಿದೆ.
ಖಾಸಗಿ ಹವಾಮಾನ ಸಂಸ್ಥೆಗಳ ಪ್ರಕಾರ ಬೆಂಗಳೂರು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಲುಪಿ ಹೊಸ ಗರಿಷ್ಠ ದಾಖಲೆಯನ್ನು ಮಾಡಿದೆ. ಆದರೆ ಭಾರತೀಯ ಹವಾಮಾನ ಇಲಾಖೆಯು ಇದನ್ನು ಒಪ್ಪಿರಲಿಲ್ಲ. ಅದರ ಪ್ರಕಾರ ಬೆಂಗಳೂರಿನ ತಾಪಮಾನ ಮೊನ್ನೆ ಶನಿವಾರದ ತನಕವೂ 37ರಿಂದ 38 ಡಿಗ್ರಿ ಸೆಲ್ಸಿಯಸ್ ಒಳಗೆ ಇತ್ತು.
ಆದರೆ ಭಾನುವಾರ ಬೆಂಗಳೂರಿನ ತಾಪಮಾನ 38.3 ಡಿಗ್ರಿ ಸೆಲ್ಸಿಯಸ್ ದಾಟಿರುವುದನ್ನು ಹವಾಮಾನ ಇಲಾಖೆ ದೃಢೀಕರಿಸಿದೆ. ಅಂತೆಯೇ ಇದು ಬೆಂಗಳೂರು ನಗರದ ಹೊಸ ಗರಿಷ್ಠ ತಾಪಮಾನ ಪ್ರಮಾಣವಾಗಿದೆ. ಆ ಮೂಲಕ ಇದು 1931ರ ಎಪ್ರಿಲ್ನಲ್ಲಿ ದಾಖಲಾಗಿದ್ದ ಬೆಂಗಳೂರಿನ 38.3 ಡಿಗ್ರಿ ಸೆಲ್ಸಿಯಸ್ ಅನ್ನು ಹಿಂದಿಕ್ಕಿದೆ.
ಬೆಂಗಳೂರಿನ ತಾಪಮಾನ ಇದೇ ರೀತಿ ಮುಂದುವರಿದಲ್ಲಿ ಅದು ನಿಶ್ಚಿತವಾಗಿಯೂ “ಏರ್ ಕಂಡೀಶಂಡ್ ಸಿಟಿ’ ಎಂಬ ತನ್ನ ಹೆಗ್ಗಳಿಕೆಯ ಹಣೆಪಟ್ಟಿಯನ್ನು ಕಳೆದುಕೊಳ್ಳಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನ ತಾಪಮಾನ ಕಡಿಮೆಯಾಗುವ ಲಕ್ಷಣಗಳೇನೂ ಇಲ್ಲ; ಆದರೆ ರಾತ್ರಿ ವೇಳೆ ಸಣ್ಣ ಮಟ್ಟಿನ ಗುಡುಗು-ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
-ಉದಯವಾಣಿ