ರಾಷ್ಟ್ರೀಯ

ಗಂಭೀರ ಪ್ರಮಾದವಾಗಿದೆ; ಕ್ಷಮಿಸಿ ಕೇಜ್ರಿವಾಲ್‌ ಜೀ : ಪರೇಶ್‌ ರಾವಲ್‌

Pinterest LinkedIn Tumblr

Paresh Car-700ಹೊಸದಿಲ್ಲಿ : ಬಿಜೆಪಿ ಸಂಸದ ಮತ್ತು ಪ್ರಸಿದ್ಧ ಬಾಲಿವುಡ್‌ ಖಳ ನಟ ಪರೇಶ್‌ ರಾವಲ್‌ ಅವರು ರಾಜಧಾನಿಯಲ್ಲಿಂದು ಬೆಸ ಸಂಖ್ಯೆಯ ವಾಹನ ಸಂಚಾರಕ್ಕೆ ಮಾತ್ರವೇ ಅವಕಾಶ ಇರುವುದನ್ನು ಮರೆತು ತಮ್ಮ ಸಮ ಸಂಖ್ಯೆಯ ಕಾರನ್ನು ರಸ್ತೆಗೊಯ್ದು ಪೊಲೀಸರಿಂದ ದಂಡ ವಿಧಿಸಲ್ಪಟ್ಟ ಘಟನೆ ನಡೆದಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಂಸದರಿಗಾಗಿ ಪಾರ್ಲಿಮೆಂಟ್‌ ತಲುಪಲು ವಿಶೇಷ ಡಿಟಿಎಸ್‌ ಬಸ್‌ ಸೇವೆಯನ್ನು ವ್ಯವಸ್ಥೆಗೊಳಿಸಿದ್ದರು. ಈ ಸೌಕರ್ಯವನ್ನು ಕೂಡ ಬಳಸದೇ, ತಮ್ಮ ಸಮ ಸಂಖ್ಯೆಯ ಕಾರನ್ನು ಇಂದಿನ ಬೆಸ ಸಂಖ್ಯೆಯ ವಾಹನ ನಿಯಮದ ದಿನದಂದು ರಸ್ತೆಗಿಳಿಸಿ ದಂಡನೆಗೆ ಗುರಿಯಾದರು.

ತನ್ನಿಂದಾದ ನಿಯಮ ಉಲ್ಲಂಘನೆಯ ಈ ಪ್ರಮಾದಕ್ಕೆ ಪರೇಶ್‌ ರಾವಲ್‌ ಅವರು ಅರವಿಂದ ಕೇಜ್ರಿವಾಲ್‌ ಅವರಲ್ಲಿ ಹಾಗೂ ದಿಲ್ಲಿ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. “ಗಂಭೀರ ಪ್ರಮಾದವನ್ನು ಎಸಗಿದ್ದೇನೆ; ಅರವಿಂದ ಕೇಜ್ರಿವಾಲರೇ ಮತ್ತು ದಿಲ್ಲಿಯ ಜನರೇ, ಕ್ಷಮಿಸಿ !’ ಎಂದು ಪರೇಶ್‌ ರಾವಲ್‌ ಟ್ವೀಟ್‌ ಮಾಡಿದ್ದಾರೆ.

ಅಂದ ಹಾಗೆ ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಯಲ್ಲಿರುವ ದಿನವಾದ ಇಂದು ನಿಯಮ ಉಲ್ಲಂಘನೆ ಮಾಡಿ ದಂಡನೆಗೆ ಗುರಿಯಾಗಿರುವ ಇತರರೆಂದರೆ ಚೌಧರಿ ಬಾಬುಲಾಲ್‌, ಪ್ರಹ್ಲಾದ್‌ ಪಟೇಲ್‌, ಉದಿತ್‌ ರಾಜ್‌, ಅಶ್ವನಿ ಚೋಪ್ರಾ, ಕೆ ಪಿ ಮೌರ್ಯ ಮತ್ತು ಬಿ ಸಿ ಖಂಡೂರಿ !
-ಉದಯವಾಣಿ

Write A Comment