ಕರ್ನಾಟಕ

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಹೊಸ ತಂತ್ರ

Pinterest LinkedIn Tumblr

Camera-sony_mc1500p_1ಬೆಂಗಳೂರು, ಏ. ೨೫ – ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ ಬೆಂಗಳೂರು ವಿಶ್ವವಿದ್ಯಾಲಯ ಇನ್ನು ಮುಂದೆ ಪರೀಕ್ಷಾ ಕೊಠಡಿಯಲ್ಲೇ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ತೆರೆಯುವ ದೃಶ್ಯಗಳ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ವಾಟ್ಸಾಪ್‌ನಲ್ಲಿ ಅಧಿಕಾರಿಗಳಿಗೆ ತಿಳಿಸುವ ವ್ಯವಸ್ಥೆ ಮಾಡಿದೆ.
ಪದವಿ ಪರೀಕ್ಷೆಗಳಲ್ಲಿ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆಯಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಲಾಗುವುದು.
ಮೇ 10 ರಿಂದ 182 ಕೇಂದ್ರಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದ್ದು, ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಅಕ್ರಮವಾಗಿ ಯಾರೂ ತೆರೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸ್ಕ್ವಾಡ್ ಸಮ್ಮುಖದಲ್ಲಿ ಮೇಲ್ವಿಚಾರಕ, (ಇನ್ಟಿಜಿಲೇಟರ್), ಚೀಫ್ ಸೂಪರಿಟೆಂಡೆಂಟ್, ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ ಸಮ್ಮುಖದಲ್ಲಿ ಬಂಡಲ್ ತೆರೆಯಲಾಗುವುದು.
ಬಂಡಲ್ ಸರಿಯಿದೆಯೇ ಇಲ್ಲವೇ ಎಂದು ವಿದ್ಯಾರ್ಥಿಗಳೇ ಪರಿಶೀಲಿಸುವರು. ನಂತರ ಬಂಡಲ್ ಬಿಚ್ಚುವುದನ್ನು ಮೊಬೈಲ್ ಫೋನಿನಲ್ಲಿ ವಿಡಿಯೋ ತೆಗೆದು ಅದನ್ನು ಅಧಿಕಾರಿಗಳಿಗೆ ವಾಟ್ಸಾಪ್ ಆಪ್ ಮೂಲಕ ಕಳಿಸಲಾಗುವುದು. ನಂತರ ಪರೀಕ್ಷೆಗಳು ಮುಗಿಯುವವರೆಗೆ ಫೋನ್ ಅಧಿಕಾರಿಗಳ ಬಳಿ ಇರುತ್ತದೆ. ಪರೀಕ್ಷೆಗಳಲ್ಲಿ ಕೊಠಡಿಯೊಳಕ್ಕೆ ಫೋನ್ ತರುವಂತಿಲ್ಲ.
2 ಲಕ್ಷದ 50 ಸಾವಿರ ಹೊಸ ಅಭ್ಯರ್ಥಿಗಳು ಸೇರಿದಂತೆ ಒಟ್ಟು 3 ಲಕ್ಷದ 50 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ತಿಂಗಳು ಎರಡನೇ ವರ್ಷದ ಪಿಯುಸಿ ಪ್ರಶ್ನೆಪತ್ರಿಕೆಗಳು ಬಯಲಾಗಿದ್ದವು.
ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಹಾಗಾಗಲು ಬಿಡಬಾರದು ಎಂದುಕೊಂಡಿದ್ದೇವೆ. ವಿಡಿಯೋ ತೆಗೆಯುವುದರಿಂದ ಇದನ್ನು ತಡೆಯಬಹುದೆಂಬುದು ನಮ್ಮ ವಿಶ್ವಾಸ ಎಂದು ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಕೆ.ಎನ್. ನಿಂಗೇಗೌಡ ಹೇಳಿದ್ದಾರೆ.
ಹಿಂದೆ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳು ವಾಟ್ಸಾಪ್ ಮೂಲಕವೇ ಹರಿದಾಡಿದ್ದವು. ಪರೀಕ್ಷಾ ದಿನಗಳಂದು ಸಂದೇಶ ವಾಹಕಗಳಿಗೆ ಕತ್ತರಿ ಹಾಕುವ ವಿ.ವಿ.ಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು.
ಪರೀಕ್ಷಾಧಿಕಾರಿಗಳೂ ಕೊಠಡಿಯೊಳಗೆ ಫೋನ್‌ಗಳನ್ನು ಕೊಂಡೊಯ್ಯದಂತೆ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ನೋಟಿಸ್ ನೀಡಲಾಗುವುದು ಎಂದೂ ನಿಂಗೇಗೌಡ ಹೇಳಿದ್ದಾರೆ.

Write A Comment