ಕರ್ನಾಟಕ

ಗೋಲ್‌ಮಾಲ್ ಕಾಮಗಾರಿ; ನ್ಯಾಯಾಂಗ ತನಿಖೆ

Pinterest LinkedIn Tumblr

K-J-GEORGEಬೆಂಗಳೂರು, ಎ.೨೩: ನಗರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಬಹುಕೋಟಿ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲೇಶ್ವರಂ, ಗಾಂಧಿನಗರ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ನೀಡಿರುವ ಕಠಾರಿಯಾ ವರದಿ ಮತ್ತು ಸಿಐಡಿ ವರದಿಗಳನ್ನು ಆಧರಿಸಿ ನಿವೃತ್ತ ನ್ಯಾಯಾಧೀಶರು, ಲೋಕೋಪಯೋಗಿ ಇಲಾಖೆಯ ಮೂವರು ನಿವೃತ್ತ ಇಂಜಿನಿಯರ್‌ಗಳು ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಅವ್ಯವಹಾರದಲ್ಲಿ ಶಾಸಕರ ಕೈವಾಡದ ಬಗ್ಗೆ ಕೇಳಿದಾಗ, ಕಡತಗಳಿಗೆ ಸಹಿ ಹಾಕುವ ಅಧಿಕಾರ ಶಾಸಕರಿಗಿರುವುದಿಲ್ಲ. ಶಾಸಕರಿಗೆ ಎಕ್ಸಿಕ್ಯೂಟಿವ್ ಅಧಿಕಾರ ಇರುವುದಿಲ್ಲ. ಶಾಸಕರೇನಿದ್ದರೂ ಶಿಫಾರಸು ಮಾಡಬಹದಷ್ಟೇ ಎಂದು ಹೇಳಿದರು.
ಬೆಂಗಳೂರು ವಿಭಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವ್ಯಯಕ್ತಿಯ ಅಭಿಪ್ರಾಯ. ಬೆಂಗಳೂರು ನಗರವನ್ನು ವಿಭಜಿಸಬೇಕು ಎಂಬುದು ಪಕ್ಷದ ನಿಲುವೂ ಆಗಿದೆ. ಈಗಾಗಲೇ ಎರಡೂ ಸದನಗಳಲ್ಲಿ ಈ ಬಗ್ಗೆ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲಾಗಿದೆ. ಅದನ್ನು ರಾಜ್ಯಪಾಲರು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ವರದಿ ಬಂದ ತಕ್ಷಣ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಬಿಎಂಪಿಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಬಜೆಟ್ ಮಂಡಿಸಿ ಅದಕ್ಕೆ ಅನುಮೋದನೆಯೂ ದೊರೆತಿದೆ. ಶಾಸಕ ಗೋಪಾಲಯ್ಯ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ವ್ಯಕ್ತಪಡಿಸುವ ಅಧಿಕಾರ ಅವರಿಗಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಕುಮಾರ್ ನಾಯಕ್ ಅವರ ವರ್ಗಾವಣೆಯನ್ನು ಸಮರ್ಥಿಸಿಕೊಂಡ ಸಚಿವರು, ಇದು ಆಡಳಿತಾತ್ಮಕ ನಿರ್ಧಾರ. ಆಡಳಿತದ ಅನುಕೂಲತೆಗಾಗಿ ಇಂತಹ ವರ್ಗಾವಣೆ ನಡೆಯುತ್ತದೆ. ವರ್ಗಾವಣೆಯ ಬಗ್ಗೆ ನಾಯಕ್ ಅವರಿಗೆ ಯಾವುದೇ ತೊಂದರೆ ಇಲ್ಲದಾಗ ನಿಮ್ಮಗೇನು ತಕರಾರು ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಅಧಿಕಾರ ಮತ್ತು ಸಿಬ್ಬಂದಿ ನೀಡಿದರೆ ಜಾಹೀರಾತಿನಿಂದ ೩೦೦ ಕೋಟಿ ಸಂಗ್ರಹಿಸುವುದಾಗಿ ಬಿಬಿಎಂಪಿ ಅಧಿಕಾರಿ ಮಥಾಯ್ ನೀಡಿರುವ ಹೇಳಿಕೆ ಬಗ್ಗೆ ಸಚಿವರ ಗಮನ ಸೆಳೆದಾಗ, ಇದು ಬಿಬಿಎಂಪಿ ಆಯುಕ್ತರಿಗೆ ಬಿಟ್ಟ ವಿಚಾರ. ಈ ಬಗ್ಗೆ ತಮಗೆ ಯಾವ ಅಧಿಕಾರವೂ ಇಲ್ಲ ಎಂದು ಜಾರಿಕೊಂಡರು.
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಗೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರೇ ಕಾರಣ. ಅವರು ಮುಖ್ಯಮಂತ್ರಿಯಾಗಿದ್ದಾಗ ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡಲಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾನೂನಿಗಿಂತ ಯಾರು ದೊಡ್ಡವರಲ್ಲ
ಯಡಿಯೂರಪ್ಪ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಸ್ಷಷ್ಪನೆ ನೀಡಿದ್ದಾರೆ. ತಾವು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರಿಗೂ ಒಂದೇ ಕಾನೂನು. ಕಾನೂನು ಪ್ರಕಾರವೇ ಎಲ್ಲವೂ ನಡೆಯುತ್ತದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಸಚಿವ ಕೆ.ಜೆ.ಜಾರ್ಜ್ ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತಳಮಟ್ಟದಲ್ಲಿ ಬೇರೂರಿದೆ. ಆದ್ದರಿಂದ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಬಿ.ಎಸ್.ಯಡಿಯೂರಪ್ಪ ಅವರಿಂದ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಅವರಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಇಂದು ಬೆಂಗಳೂರಿಗೆ ಆಗಮಿಸಿ, ಮೆಟ್ರೋ ನಿಗಮದ ಅಧ್ಯಕ್ಷನ್ನು ಭೇಟಿಯಾಗುತ್ತಿದ್ದಾರೆ. ಸಚಿವರ ಸಮಯ ನೋಡಿಕೊಂಡು ಮೆಟ್ರೋ ಉದ್ಘಾಟನೆಯ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು.

Write A Comment