ರೋಣ: ಪಟ್ಟಣದ ಪೋತರಾಜನ್ ಕಟ್ಟೆಯ ಹತ್ತಿರ ಗುರುವಾರ ತಡರಾತ್ರಿ ಕೈಚಳಕ ತೋರಿರುವ ಕಳ್ಳರು ಕೆನರಾ ಬ್ಯಾಂಕ್ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಎಟಿಎಂ ಯಂತ್ರದ ಭದ್ರತೆಗೆ ಕಾವಲುಗಾರರನ್ನು ನಿಯೋಜಿಸದೇ ಇರುವುದರಿಂದ ಕಳ್ಳತನ ಸುಸೂತ್ರವಾಗಿ ನಡೆದಿದ್ದು, ಕಳ್ಳರು ಸಿಸಿಟಿವಿ ವೈರ್ ಕಟ್ ಮಾಡಿ ಯಂತ್ರದ ಸಮೇತ ಪರಾರಿಯಾಗಿದ್ದಾರೆ. ಯಂತ್ರದಲ್ಲಿ 7 ಲಕ್ಷ ರೂ.ಗೂ ಅಧಿಕ ಹಣವಿತ್ತು ಎನ್ನಲಾಗಿದೆ. 8 ರಿಂದ 10 ಜನರ ಕಳ್ಳರ ತಂಡ ಈ ಕೃತ್ಯ ಎಸಗಿರುವ ಕುರಿತು ಶಂಕಿಸಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಂತ್ರಕ್ಕೆ ಸೆಕ್ಯೂರಿಟಿ ನಿಯೋಜಿಸಿ. ಹೊರಗೆ ಬಿಟ್ಟಿದ್ದ ಸಿಸಿಟಿವಿ ವೈರ್ ಬದಲಿಸುವಂತೆ ಸಾಕಷ್ಟು ಬಾರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರೂ, ಅದರ ಬಗೆಗೆ ಕ್ರಮಕೈಗೊಳ್ಳಲಿಲ್ಲ. ಕಳ್ಳತನಕ್ಕೆ ಇದೇ ಮುಖ್ಯ ಕಾರಣ ಎಂದು ಪಿಎಸ್ಐ ವಿಶ್ವನಾಥ ಚೌಗಲೆ ತಿಳಿಸಿದ್ದಾರೆ.