ಮನೋರಂಜನೆ

ತಂದೆ-ಮಗಳ ಬಾಂಧವ್ಯ ಬೆಸೆಯುವ ತಾವೂಸ್ ಚಮನ್ ಕಿ ಮೈನಾ

Pinterest LinkedIn Tumblr

dramaReviewನಯ್ಯರ್ ಮಸೂದ್ ಅವರ ಉರ್ದು ಕಥೆ ಆಧರಿಸಿದ ‘ತಾವೂಸ್ ಚಮನ್ ಕಿ ಮೈನಾ’ ನಾಟಕವನ್ನು ಮುಂಬೈನ ಗಿಲ್ಲೊ ಥಿಯೇಟರ್ ರೆಪರ್ಟರಿ ತಂಡ ದಕ್ಷಿಣ ಭಾರತ ರಂಗೋತ್ಸವದಲ್ಲಿ ಪ್ರದರ್ಶಿಸಿದರು. ರಂಗರೂಪಕ್ಕೆ ಒಳಪಡಿಸಿ ಸಮರ್ಥವಾಗಿ ವೇದಿಕೆಯ ಮೇಲೆ ಕಾಣಿಸಿದವರು ಪ್ರಸಿದ್ಧ ನಿರ್ದೇಶಕ ಅತುಲ್ ತಿವಾರಿ.

ನಾಟಕದ ವಸ್ತು 1846 ಕಾಲದ್ದು, ಭಾರತೀಯ ರಾಜ ಮನೆತನಗಳನ್ನು ಸೋಲಿಸಿ ಈಸ್ಟ್ ಇಂಡಿಯಾ ಕಂಪನಿ ಭದ್ರವಾಗಿ ನೆಲೆಯೂರುತ್ತಿದ್ದ ಕಾಲವದು. ಔದಿನ ದೊರೆ ವಜೀದ್ ಅಲಿಖಾನ್​ನನ್ನು ಸೆರೆಹಿಡಿದು ರಾಜ್ಯವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ, ರಾಜನ ಪ್ರಜಾಪ್ರೀತಿ ಮತ್ತು ಪ್ರಜೆಗಳ ದೇಶಪ್ರೇಮವನ್ನು ತಿಳಿಸುವುದರೊಂದಿಗೆ ತಂದೆ ಕಾಲೆಖಾನ್ ಮತ್ತು ಮಗಳು ಫಲಕಾರಳ ನಡುವಿನ ಬಾಂಧವ್ಯವನ್ನು ನಾಟಕ ಕಟ್ಟಿಕೊಡುತ್ತದೆ.

ಮೂವರು ಕೈದಿಗಳು ತಾವು ಜೈಲಿಗೆ ಬರಲು ಕಾರಣವಾದ ಸಂಗತಿಯ ಚರ್ಚೆಯೊಂದಿಗೆ ನಾಟಕ ಪ್ರಾರಂಭವಾಗುತ್ತದೆ. ಕಾಲೆಖಾನ್ ಮಾತನಾಡುವ ಮೈನಾ ಹಕ್ಕಿಯ ಕಾರಣದಿಂದ ಜೈಲು ಸೇರಿದ್ದಾನೆ. ದೊರೆ ವಜೀದ್ ಅಲಿಖಾನ್​ನ ಮಯೂರ ಉದ್ಯಾನದಲ್ಲಿ 40 ಮಾತನಾಡುವ ಮೈನಾಗಳನ್ನು ನೋಡಿಕೊಳ್ಳುವ ಕೆಲಸ ಕಾಲೆಖಾನ್​ನದು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಮುದ್ದಿನ ಮಗಳು ಫಲಕಾರ ತನಗೊಂದು ಮಾತನಾಡುವ ಮೈನಾ ಬೇಕೆಂದು ತುಂಬಾ ದಿನದಿಂದ ಕೇಳುತ್ತಿರುತ್ತಾಳೆ. ಮಗಳನ್ನು ಖುಷಿಪಡಿಸಲು ಒಂದು ಮುದ್ದಿನ ಮೈನಾ ಕದಿಯುತ್ತಾನೆ. ದೊರೆ ಮಾತನಾಡುವ ಮೈನಾಗಳನ್ನು ಬ್ರಿಟಿಷ್ ಅಧಿಕಾರಿಗೆ ತೋರಿಸಲು ಬಂದಾಗ, ಮುದ್ದಿನ ಮೈನಾ ಕಾಣಿಸುವುದಿಲ್ಲ. ಆ ರಾತ್ರಿಯೇ ಕಾಲೆಖಾನ್ ಮನೆಯಿಂದ ಮೈನಾ ಹಕ್ಕಿಯನ್ನು ಮರಳಿ ತಂದುಬಿಡುತ್ತಾನೆ. ಮೈನಾ ಹಾಡನ್ನು ಕೇಳಲುಬಂದ ಬ್ರಿಟಿಷ್ ರಾಣಿ ಅದನ್ನು ಇಷ್ಟಪಡುತ್ತಾಳೆ.

ಮಗಳಿಗಾಗಿ ಮೈನಾ ಹಕ್ಕಿಯನ್ನು ಕದ್ದ ಸಂಗತಿ ತಿಳಿದ ವಜೀದ್ ಅಲಿಖಾನ್, ತಂದೆ- ಮಗಳ ಬಾಂಧವ್ಯಕ್ಕೆ ಮೆಚ್ಚಿ ಶಿಕ್ಷೆಯ ಬದಲು ಮೈನಾ ಮತ್ತು ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುತ್ತಾನೆ. ಬ್ರಿಟಿಷ್ ಅಧಿಕಾರಿಯಿಂದ ಮೈನಾ ಹಕ್ಕಿಯ ಬೇಡಿಕೆ ಬಂದಾಗ ಉಡುಗೊರೆಯಾಗಿ ಕೊಟ್ಟ ಸಂಗತಿ, ಅಧಿಕಾರಿಯ ಬೆದರಿಕೆ, ದೊರೆಯ ಪ್ರಜಾಪ್ರೀತಿ, ಮೈನಾ ಹಕ್ಕಿ ರಕ್ಷಣೆಗೆ ಪಠಾಣನ ಸಹಾಯ, ಸಿಟ್ಟಿಗೆದ್ದ ಬ್ರಿಟಿಷರು ದಂಡೆತ್ತಿ ಔದಿನ ಮೇಲೆ ದಾಳಿ, ದೊರೆಯನ್ನು ಕೋಲ್ಕತ್ತಕ್ಕೆ ಗಡಿಪಾರು, ಕೊಡೆಯನ್ನು ಕದ್ದ ಆರೋಪದ ಮೇಲೆ ಕಾಲೆಖಾನ್​ನ ಬಂಧನ- ಬಿಡುಗಡೆ, ಮನೆಗೆ ಮರಳಿದಾಗ ಫಲಕಾರ ಬಂಧನದಲ್ಲಿದ್ದ ಮೈನಾ ಹಕ್ಕಿಯ ಆಜಾದಿಯೊಂದಿಗೆ ನಾಟಕ ಮುಗಿಯುತ್ತದೆ.

ತಂದೆ-ಮಗಳ ಬಾಂಧವ್ಯವನ್ನು ಇತಿಹಾಸದೊಂದಿಗೆ ತಳಕುಹಾಕಿರುವ ನಿರ್ದೇಶಕ ಅತುಲ್ ತಿವಾರಿ ಕೌಶಲ ಮೆಚ್ಚುವಂತದ್ದು. ಕೊಹಿನೂರ್ ವಜ್ರ ಯಾರಿಗೆ ಸೇರಿದ್ದೆಂಬುದರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮೈನಾ ಹಕ್ಕಿಯ ರಕ್ಷಣೆ- ಸ್ವಾತಂತ್ರ್ಯ ಚರ್ಚೆ- ಆಜಾದಿಯ ಚರ್ಚೆಯನ್ನು ಸೇರಿಸಿರುವುದರಿಂದ ನಾಟಕ ಪ್ರಸ್ತುತ ಅನ್ನಿಸುತ್ತದೆ.

ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಈ ನಾಟಕಕ್ಕೆ ವಿನ್ಯಾಸ ಮಾಡಿದ್ದಾರೆ. ಸೆರಾಸನಿಕ್ ಶೈಲಿಯ ಕಮಾನುಗಳ ತೆರೆಯನ್ನು ನೇತುಹಾಕಿ ಹಳೆಯ ಲಖನೌ ನಗರವನ್ನು, ನೀಳ್ಗಂಬದ ಮೂಲಕ ಬೃಹತ್ ಪಂಜರವನ್ನು, ಮುಖವಾಡಗಳ ಮೂಲಕ ಗಿಳಿ- ಮೈನಾಗಳನ್ನು ಪಡಿಮೂಡಿಸಿದ್ದಾರೆ. ಫಲಕಾರ ಪಾತ್ರದಲ್ಲಿ ವಿಯಾಂಕ ವರ್ಮ, ಕಾಲೆಖಾನ್ ಆಗಿ ವಿಘ್ನೕಶ್ ಶಿಂಕರ್, ಮೈನಾ ಹಕ್ಕಿಯಾಗಿ ಅಫ್ಸಾನಾ ಖಾನ್ ಹಾಗೂ ಇತರ ಕಲಾವಿದರು ಲವಲವಿಕೆಯಿಂದ ಅಭಿನಯಿಸಿದರು.

ನಾಟಕದಲ್ಲಿ ದೃಶ್ಯಗಳ ನಡುವೆ ರಂಗಪರಿಕರಗಳನ್ನು ಕಲಾತ್ಮಕವಾಗಿ ಬದಲಾಯಿಸುವವರ ನೈಪುಣ್ಯ ಅನುಕರಣೀಯ. ಅಮೋದ್ ಭಟ್ಟರ ಸಂಗೀತ ಮತ್ತು ಹಾಡುಗಳು ಮೆಲುಕುಹಾಕುವಂತಿವೆ. ಪೂಜಾ ಪಂಥ್ ಲಖನೌ ಪಾರಂಪರಿಕ ಕಥಕ್ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಟಕವು ಎರಡೂವರೆ ಗಂಟೆಗಳಷ್ಟು ಸುದೀರ್ಘವಾಗಿದ್ದರೂ ಎಲ್ಲೂ ಬೇಸರ ಉಂಟುಮಾಡುವುದಿಲ್ಲ. ಉರ್ದು ಭಾಷೆಯ ಮಾಧುರ್ಯವನ್ನು ನಾಟಕದ ಪ್ರತಿ ದೃಶ್ಯದಲ್ಲೂ ನೋಡಬಹುದಾಗಿದೆ. ಒಟ್ಟಿನಲ್ಲಿ ‘ತಾವೂಸ್ ಚಮನ್ ಕಿ ಮೈನಾ’ ರೆಪರ್ಟರಿಗಳ ಕ್ಲಿಷ್ಟಕರವಾದ ಆಂಗಿಕ ಕಸರತ್ತುಗಳಿಲ್ಲದೆ ಸಹಜ ಸುಂದರವಾಗಿ ಮೂಡಿಬಂದಿದೆ.

Write A Comment