ಕರ್ನಾಟಕ

ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ

Pinterest LinkedIn Tumblr

tb-jayachandraclrಬೆಂಗಳೂರು, ಏ. ೨೦- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 50 ಲಕ್ಷ ರೂ.ವರೆಗಿನ ಕಾಮಗಾರಿಗಳಲ್ಲಿ ಶೇ. 24 ರಷ್ಟು ಕಾಮಗಾರಿಗಳನ್ನು ಈ ವರ್ಗಗಳಿಗೆ ಮೀಸಲಿರಿಸಿ ಟೆಂಡರ್ ಇಲ್ಲದೆ ಕಾಮಗಾರಿಗಳ ಗುತ್ತಿಗೆ ನೀಡಲು ಕರ್ನಾಟಕ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ಸಚಿವ ಸಂಪುಟ ಕೈಗೊಂಡಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರು, 2013-14ರ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈಗ ಈ ಮೀಸಲಾತಿ ತೀರ್ಮಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ರಾಜ್ಯದ ಎಲ್ಲಾ ಇಲಾಖೆಗಳ ಕಾಮಗಾರಿಗಳಲ್ಲೂ ಪರಿಶಿಷ್ಟ ಜಾತಿ, ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ. 50 ಲಕ್ಷ ವರೆಗಿನ ಒಟ್ಟು ಕಾಮಗಾರಿಗಳಲ್ಲಿ ಶೇ. 17.1 ರಷ್ಟು ಕಾಮಗಾರಿಗಳನ್ನು ಪರಿಶಿಷ್ಟ ಜಾತಿಗೂ, ಶೇ. 6.95 ಕಾಮಗಾರಿಗಳನ್ನು ಪರಿಶಿಷ್ಟ ವರ್ಗದವರಿಗೂ ಮೀಸಲಿರಿಸಲಾಗುವುದು ಎಂದರು.
ಪರಿಶಿಷ್ಟ ಜಾತಿ, ವರ್ಗದವರಿಗೆ ನೀಡಿರುವ ಈ ಕಾಮಗಾರಿಗಳಲ್ಲಿ ಟೆಂಡರ್ ಕರೆಯುವ ಅಗತ್ಯವಿಲ್ಲ. ಈ ಸಂಬಂಧ ಪಾರದರ್ಶಕ ಕಾಯ್ದೆಗ ತಿದ್ದುಪಡಿ ತರಲಾಗುವುದು. ಒಂದು ವೇಳೆ ಈ ವರ್ಗಗಳಲ್ಲೆ ಗುತ್ತಿಗೆ ಪಡೆಯಲು ಪೈಪೋಟಿ ಬಂದರೆ ಅಂತಹ ಪ್ರಕರಣಗಳಲ್ಲಿ ಲಾಟರಿ ಮೂಲಕ ಕಾಮಗಾರಿಗಳ ಗುತ್ತಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಬೇಸಿಗೆ ರಜೆಯಲ್ಲೂ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು. ‌
ಬರ ಪೀಡಿತ 137 ತಾಲ್ಲೂಕುಗಳಲ್ಲಿ ಬೇಸಿಕೆ ರಜೆಯ 39 ದಿನಗಳು ಮಧ್ಯಾಹ್ನದ ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ನೀಡಲು ಸಂಪುಟ ಒಪ್ಪಿಗೆ ನೀಡಿತು ಎಂದರು.
ಆರೋಗ್ಯ ವಿವಿಗೆ ಹಣ
ರಾಮನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 580 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಯಡಿ ಈಗಾಗಲೇ 468 ಕೋಟಿ ರೂ.ಗಳ ಕಾಮಗಾರಿಗಳಿಗೆ ಟೆಂಡರ್ ಅಂತಿಮಗೊಂಡಿದ್ದು, ನಾಗಾರ್ಜುನ ಕಂಪೆನಿಗೆ ಈ ಟೆಂಡರ್ ನೀ‌ಡಲಾಗಿದೆ ಎಂದರು.
250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ಸೇರಿದಂತೆ ಅಗತ್ಯ ಕಟ್ಟಡಗಳನ್ನು ನಿರ್ಮಿಸಲು ಈ ಹಣ ಒದಗಿಸಲಾಗಿದೆ ಎಂದರು.
ಉಪನಗರ ಯೋಜನೆ ತೀರ್ಮಾನ
ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ ರಾಮನಗರ, ನಂದಗುಡಿ, ಸಾತನೂರು, ಸೋಲೂರಿನಲ್ಲಿ ಉಪನಗರಗಳ ಅಭಿವೃದ್ಧಿಗೆ ಯೋಜನೆ ತಯಾರಿಸಲು ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಕಲ್ಬುರ್ಗಿ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವ ಹೊಣೆಗಾರಿಕೆಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದ್ದು, 109 ಕೋಟಿ ರೂ.ಗಳಲ್ಲಿ ಲೋಕೋಪಯೋಗಿ ಇಲಾಖೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಿದೆ ಎಂದರು.
ನ್ಯಾಯಾಲಯ ಕಟ್ಟಡಗಳಿಗೆ ಒಪ್ಪಿಗೆ
ಮುದ್ದೆಬಿಹಾಳ, ನಿಪ್ಪಾಣಿ, ಸಂಕೇಶ್ವರ, ಮುಂಡರಗಿ, ಚಿತ್ತಾಪುರ ಇಲ್ಲಿ ನ್ಯಾಯಾಲಯ ಕಟ್ಟಡಗಳನ್ನು ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ ಎಂದರು.
ಷೇರು ಖರೀದಿ ಇಲ್ಲ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳನ್ನು ಜಿ.ವಿ.ಕೆ. ಕಂಪೆನಿಯಿಂದ ಖರೀದಿಸದಿರುವ ತೀರ್ಮಾನಕ್ಕೆ ಸಂಪುಟ ಸಭೆ ಬಂದಿದೆ ಅವರು ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ತಲಾ ಶೇ. 13 ರಷ್ಟು ಷೇರುಗಳನ್ನು ಹೊಂದಿದ್ದು, ಜಿವಿಕೆ ಕಂಪೆನಿ ತಮ್ಮ ಷೇರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದ್ದು, ಕರಾರಿನಂತೆ ಷೇರು ಮಾರಾಟ ಮಾಡುವಾಗ ರಾಜ್ಯ ಸರ್ಕಾರಕ್ಕೆ ಮೊದಲ ಆದ್ಯತೆ ನೀಡಬೇಕಿದ್ದು, ರಾಜ್ಯ ಸರ್ಕಾರ ಷೇರು ಖರೀದಿ ಬೇಡ ಎಂಬ ತೀರ್ಮಾನಕ್ಕೆ ಬಂದಿದೆ. ಇದರಿಂದ ಜಿವಿಕೆ ಕಂಪೆನಿ ಬೇರೆಯವರಿಗೆ ಷೇರು ಮಾರಬಹುದು ಎಂದು ಅವರು ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೊರ ರಾಜ್ಯಗಳಲ್ಲಿ ಯಾವುದೇ ಕೋರ್ಸ್‌ಗಳನ್ನು ನಡೆಸಬಾರದು ಎಂಬ ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ವ್ಯಾಪ್ತಿಯನ್ನು ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸುವ ತಿದ್ದುಪಡಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಜಯಚಂದ್ರ ಹೇಳಿದರು.

Write A Comment