ಕರ್ನಾಟಕ

ಬರ ಅಧ್ಯಯನಕ್ಕೆ ಸಮಿತಿ

Pinterest LinkedIn Tumblr

jayachandraಬೆಂಗಳೂರು, ಏ. ೨೦- ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನಕ್ಕೆ ವಿಭಾಗವಾರು ಮಟ್ಟದಲ್ಲಿ ಸಚಿವ ಸಂಪುಟದ ನಾಲ್ಕು ಅಧ್ಯಯನ ಸಮಿತಿಗಳನ್ನು ರಚಿಸಲು ಸಂಪುಟ ಸಭೆ ನಿರ್ಧರಿಸಿದೆ.
ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾ‌ಡಿದ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, 4 ವಿಭಾಗವಾರು ಮಟ್ಟದಲ್ಲಿ ಸಚಿವ ಸಂಪುಟದ ನಾಲ್ಕು ಉಪಸಮಿತಿಗಳನ್ನು ಅಧ್ಯಯನಕ್ಕಾಗಿ ರಚಿಸಲಾಗಿದೆ. ಈ ಸಮಿತಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಈ ತಿಂಗಳ 30ರ ಒಳಗೆ ವರದಿ ಸಲ್ಲಿಸಲಿವೆ ಎಂದರು.
ಬೆಂಗಳೂರು ವಿಭಾಗಕ್ಕೆ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಮೈಸೂರು ವಿಭಾಗಕ್ಕೆ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, ಬೆಳಗಾವಿ ವಿಭಾಗಕ್ಕೆ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಗುಲ್ಬರ್ಗಾ ವಿಭಾಗಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಉಪಸಮಿತಿಗಳನ್ನು ಬರ ಅಧ್ಯಯನಕ್ಕಾಗಿ ರಚಿಸಲಾಗಿದೆ ಎಂದರು.
ಬರ ಪರಿಸ್ಥಿತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕುಡಿಯುವ ನೀರಿಗೆ ಅಗತ್ಯ ಹಣ ಒದಗಿಸುವ ಬಗ್ಗೆಯೂ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಬೆಳೆ ನಷ್ಟ ಪರಿಹಾರ ಹಣದಲ್ಲಿ ಶೇಕಡ 99ರಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹೆಚ್ಚುವರಿಯಾಗಿ 100 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಮೊದಲೇ 50 ಕೋಟಿ ರೂ. ಗಳನ್ನು ಬಿ‌ಡುಗ‌‌ಡೆ ಮಾಡಲಾಗಿದೆ ಎಂದರು.

Write A Comment