ಕರ್ನಾಟಕ

ಪಿಎಫ್‌ ಪ್ರತಿಭಟನೆ: ಬೆಂಗಳೂರಿನಲ್ಲಿ ಸೇನೆ ನಿಯೋಜನೆ

Pinterest LinkedIn Tumblr

RAFಬೆಂಗಳೂರು(ಪಿಟಿಐ): ‌‌‌‌‌ಪಿಎಫ್‌ ಸಂಬಂಧ ಸೋಮವಾರ ಹಾಗೂ ಮಂಗಳವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಎಚ್ಚೆತ್ತಿರುವ ಸರ್ಕಾರ, ಬೆಂಗಳೂರಿನಲ್ಲಿ ಬುಧವಾರ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಿದೆ.

ನೂತನ ಭವಿಷ್ಯ ನಿಧಿ(ಪಿಎಫ್‌) ನೀತಿ ವಿರುದ್ಧದ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ನಡೆಸುತ್ತಿದ್ದ ಹೋರಾಟ ಮಂಗಳವಾರ ತೀವ್ರತರ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.

ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್‌) ಸಿಬ್ಬಂದಿಯು ಬುಧವಾರ ಜಾಲಹಳ್ಳಿ ಕ್ರಾಸ್ ಭಾಗದಲ್ಲಿ ಪಥ ಸಂಚಲನ ನಡೆಸಿದ್ದಾರೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ(ಕೆಎಸ್‌ಆರ್‌ಪಿ) 15 ತುಕಡಿಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್‌) ಹಾಗೂ ಆರ್‌ಎಎಫ್‌ನ ಮೂರು ತುಕಡಿ ಮತ್ತು ನಗರ ಸಶಸ್ತ್ರ ಮೀಸಲು ಪಡೆಯ(ಸಿಎಆರ್‌) ಆರೇಳು ತುಕಡಿಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

18 ಪ್ರಕರಣ: ಮತ್ತೊಂದೆಡೆ, ‘ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಹಾಗೂ ಮಂಗಳವಾರ ತಲಾ ಒಂಬತ್ತು ಮೊಕದ್ದಮೆಗಳಂತೆ ಒಟ್ಟು 18 ಪ್ರಕರಣಗಳನ್ನು ದಾಖಲಿಸಿದ್ದೇವೆ. ಈವರೆಗೂ ಸುಮಾರು 50 ಜನರನ್ನು ಬಂಧಿಸಿದ್ದೇವೆ’ ಎಂದು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.

ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ ಹಾಗೂ ವಾಹನಗಳಿಗೆ ಬೆಂಕಿ ಇಟ್ಟಿರುವ ಚಿತ್ರಗಳು ಹಾಗೂ ದೃಶ್ಯಾವಳಿಗಳು ಪೊಲೀಸರ ಬಳಿಯಿದ್ದು, ಆರೋಪಿಗಳನ್ನು ಬಂಧಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

‘ಬುಧವಾರ ಪ್ರತಿಭಟನೆ ಅಥವಾ ಮೆರವಣಿಗೆ ಏನೊಂದು ಇಲ್ಲ. ಆದರೂ ನಮ್ಮ ಬಂದೋಬಸ್ತ್ ಮುಂದುವರೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

Write A Comment