ಅಂತ್ಯಸಂಸ್ಕಾರದ ನಂತರ ತಂದೆಯ ಶವವನ್ನು ಸ್ಮಾಶನದಿಂದ ತಂದು ಮನೆಯಲ್ಲಿ ಇರಿಸಿಕೊಂಡಿದ್ದ ವಿಚಿತ್ರ ಘಟನೆ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿ ನಡೆದಿದೆ. ಕಳೆದೊಂದು ವಾರದ ಹಿಂದೆ ಚೋಟಾಸಾಬ್(70) ಎಂಬುವರು ಮೃತಪಟ್ಟಿದ್ದರು. ಸಂಬಂಧಿಕರು, ಗ್ರಾಮಸ್ಥರೆಲ್ಲರೂ ಸೇರಿ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ತಂದೆಯ ಅಗಲಿಕೆಯನ್ನು ಸಹಿಸಲಾಗದೆ ಆತನ ಪುತ್ರ ಇಲಿಯಾಸ್ ಕಳೆದ ಭಾನುವಾರ ರಾತ್ರಿ ಸ್ಮಶಾನಕ್ಕೆ ಹೋಗಿ ಮಣ್ಣು ತೆಗೆದು ಶವವನ್ನು ಹೊರತೆಗೆದು ಮನೆಗೆ ತಂದಿದ್ದ. ಕೋಣೆಯೊಂದರಲ್ಲಿ ಬಾಕ್ಸ್‌ನಲ್ಲಿಟ್ಟು ಪ್ರತಿ ದಿನ ಅಲ್ಲೇ ಕೂರುತ್ತಿದ್ದ.
ಮನೆಯಲ್ಲಿ ಯಾರೂ ಇರದಿದ್ದ ಕಾರಣ ಈ ಘಟನೆ ಯಾರಿಗೂ ತಿಳಿದಿರಲಿಲ್ಲ. ಆದರೆ, ಇಂದು ಬೆಳಗ್ಗೆ ಮನೆಯಲ್ಲಿ ವಾಸನೆ ಬರುತ್ತಿದುದ್ದನ್ನು ಗಮನಿಸಿದ ಕೆಲವರು ಇಲಿಯಾಸ್‌ನನ್ನು ಹೊರಗೆ ಕರೆತಂದು ವಿಚಾರಿಸಿದಾಗ ಎಲ್ಲವನ್ನು ಹೇಳಿದ್ದಾನೆ. ಇದರಿಂದ ಒಂದು ಕ್ಷಣ ವಿಚಲಿತರಾದ ಅಕ್ಕಪಕ್ಕದವರು ಕೂಡಲೇ ಪೊಲೀಸರಿಗೆ ಹಾಗೂ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ತಂದೆಯ ಅಗಲಿಕೆಯ ದುಃಖ ಈತನಿಂದ ಈ ರೀತಿ ಮಾಡಿಸಿದೆ. ಇದರಲ್ಲಿ ಬೇರೆ ಯಾವ ಉದ್ದೇಶ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈಗ ಮತ್ತೊಮ್ಮೆ ಅಂತ್ಯಸಂಸ್ಕಾರ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿದ್ದಾರೆ.