ಕರ್ನಾಟಕ

ನಾಯಿಂದ – ಹಜಾಮ ಶಬ್ಧ ನಿಷೇಧ

Pinterest LinkedIn Tumblr

Sidduಬೆಂಗಳೂರು, ಏ. ೨೦- ರಾಜ್ಯದಲ್ಲಿನ ನಾಯಿಂದ ಮತ್ತು ಹಜಾಮ ಸಮುದಾಯದವರಿಗೆ ಇನ್ನು ಮುಂದೆ ಸವಿತಾ ಸಮಾಜ ಎಂದು ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನಾಯಿಂದ ಮತ್ತು ಹಜಾಮ ಎಂಬ ಪದಗಳ ಬಳಕೆಯನ್ನು ರದ್ದು ಮಾಡಬೇಕು. ಅದಕ್ಕೆ ಬದಲಾಗಿ ಸವಿತಾ ಸಮಾಜ ಎಂದು ಕರೆಯಬೇಕು. ಆ ಹೆಸರಿನಲ್ಲೇ ಪ್ರಮಾಣ ಪತ್ರ ನೀಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ರಾಜ್ಯದ ಬೇರೆ ಬೇರೆ ಕಡೆ ನಾಯಿಂದ ಹಾಗೂ ಹಜಾಮ ಎಂದು ಕರೆಯಲಾಗುತ್ತಿದೆ. ಇನ್ನು ಮಂದೆ ಈ ಪದಗಳನ್ನು ಬಳಕೆ ಮಾಡದೆ ಸವಿತಾ ಸಮಾಜ ಎಂಬ ಹೆಸರಿನಲ್ಲಿ ಈ ಸಮುದಾಯಗಳ ಜನರಿಗೆ ಪ್ರಮಾಣ ಪತ್ರ ನೀಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.
ಅನುದಾನಕ್ಕೆ ಒಪ್ಪಿಗೆ
ನಷ್ಟದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ (ಮೈ ಶುಗರ್)ಗೆ 2015-16ನೇ ಸಾಲಿಗೆ ಕಬ್ಬು ಅರೆಯಲು 27 ಕೋಟಿ ರೂ. ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಈ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಈಗಾಗಲೇ ಹಲವು ಬಾರಿ ಅನುದಾನ ನೀಡಲಾಗಿದೆ ಎಂದ ಅವರು, ಕಾರ್ಖಾನೆಯನ್ನು ಪುನಶ್ಚೇನಗೊಳಿಸಲು ಸಾಧ್ಯತೆ ಇದೆಯೇ ಎಂಬ ಬಗ್ಗೆ ಕಾಲಮಿತಿಯಲ್ಲಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ರೈತರ ಹಿತದೃಷ್ಟಿಯಿಂದ ಕಾರ್ಖಾನೆಗೆ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ ಕಡಿಮೆಯಾಗಿರುವುದರಿಂದ ಕಾರ್ಖಾನೆ ನಷ್ಟದಲ್ಲಿದೆ ಎಂದು ಅವರು ತಿಳಿಸಿದರು.

Write A Comment