ಕರ್ನಾಟಕ

ಜೂ. 2 ರಾಜ್ಯ ಸರ್ಕಾರಿ ನೌಕರರ ಸಂಪು: ವೇತನ ತಾರತಮ್ಯಕ್ಕೆ ಪ್ರತಿಭಟನೆ

Pinterest LinkedIn Tumblr

protest-2ಬೆಂಗಳೂರು, ಏ. ೨೦- ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ಜೂ. ೨ ರಂದು ಸಾಂಕೇತಿಕ ಮುಷ್ಕರ ನಡೆಸಲು ರಾಜ್ಯ ಸರ್ಕಾರಿ ನೌಕರರು ತೀರ್ಮಾನಿಸಿದ್ದಾರೆ.
ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಜೂ. ೨ ರಂದು ಕಚೇರಿಗಳಿಗೆ ಹಾಜರಾಗಿ ಯಾವುದೆ ಕೆಲಸ ಮಾಡದೆ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಇಂದು ಮಧ್ಯಾಹ್ನ ಮಂಜೇಗೌಡ ಮತ್ತು ಸಂಘದ ಇತರ ಪದಾಧಿಕಾರಿಗಳ ನಿಯೋಗ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜೇಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ನಿವಾರಿಸುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಪರಿಗಣಿಸಿಲ್ಲ. ಬಜೆಟ್ ಪೂರ್ವದಲ್ಲೂ ಹಣಕಾಸು ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವು. ಆದರೂ, ಅದಕ್ಕೆ ಅವರು ಸ್ಪಂದಿಸಿಲ್ಲ ಎಂದು ಹೇಳಿದರು.
ನಾನಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನವನ್ನು ಆಯಾ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿವೆ. ಕರ್ನಾಟಕದಲ್ಲಿ ಮಾತ್ರ ಈ ನಿಯಮ ಜಾರಿಯಾಗಿಲ್ಲ ಎಂದು ಅವರು ಹೇಳಿದರು.
ಜೂ. ೨ ರವರೆಗೂ ಕಾದು ನೋಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಈ ಗಡುವಿನೊಳಗೆ ಸ್ಪಂದಿಸಿದರೆ ಉದ್ದೇಶಿತ ಮುಷ್ಕರ ಕೈಬಿಡಲಾಗುವುದು. ಇಲ್ಲದಿದ್ದಲ್ಲಿ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು.

Write A Comment