ತುಮಕೂರು, ಏ.19- ಈ ಭೂಪನಿಗೆ ಎರಡು ಮದುವೆಯಾಗಿದ್ರು ಕೂಡ ಮತ್ತೊಂದು ಮದ್ವೆ ಬೇಕಂತೆ… ಮದುವೆಯಾಗುವಂತೆ ನವ ವಿವಾಹಿತೆಯೊಬ್ಬಳ ಮನೆ ಬಾಗಿಲು ಬಡಿದು ಗ್ರಾಮಸ್ಥರಿಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಪ್ರಸಂಗ ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಆದಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನವಳ್ಳಿ ಗ್ರಾಮದ ರಂಗಸ್ವಾಮಿ (38) ಬಾಗಿಲು ಬಡಿದು ಏಟು ತಿಂದ ಭೂಪ.
ಏನಿದು ರಂಗಸ್ವಾಮಿ ಆಟ:
ಈಗಾಗಲೇ ರಂಗಸ್ವಾಮಿಗೆ ಎರಡು ಮದುವೆಯಾಗಿದೆ. ಇದು ಸಾಲದು ಅಂತಾ ಹೊನ್ನವಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಹಿಂದೆ ಬಿದ್ದಿದ್ದ ಈತ ವಿವಾಹವಾಗುವಂತೆ ಪೀಡಿಸುತ್ತಿದ್ದ. ಈತನ ನಡತೆ ಗಮನಿಸಿದ ಗ್ರಾಮದ ಹಿರಿಯರು ಕರೆಸಿ ಸಾಕಷ್ಟು ಬಾರಿ ಬುದ್ಧಿ ಹೇಳಿದ್ರು… ಆದರೂ ಈತ ತನ್ನ ಚಾಳಿ ಮಾತ್ರ ಬಿಟ್ಟಿರಲಿಲ್ಲ. ಈತನ ಕಾಟದಿಂದ ರೋಸಿ ಹೋದ ಯುವತಿಯ ಪೋಷಕರು ಕಳೆದ 20 ದಿನಗಳ ಹಿಂದೆ ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿದರು. ಇಷ್ಟೆಲ್ಲಾ ಆದ್ರೂ ಈತ ತನ್ನ ಚಾಳಿ ಬಿಡದೆ ಇಂದು ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಯುವತಿಯ ಮನೆ ಬಾಗಿಲು ಬಡಿಯುತ್ತಿದ್ದ ಎನ್ನಲಾಗಿದೆ.
ಈ ಶಬ್ದ ಕೇಳಿದ ಅಕ್ಕಪಕ್ಕದ ನಿವಾಸಿಗಳು ಈತನನ್ನು ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹೊನ್ನವಳ್ಳಿ ಠಾಣೆ ಪೊಲೀಸರು ರಂಗಸ್ವಾಮಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.