ಕರ್ನಾಟಕ

ಕಂದಾಯ ಪರಿಷ್ಕರಣೆ ನಾಗರಿಕರ ಅಸಮಾಧಾನ

Pinterest LinkedIn Tumblr

kandayaಬೆಂಗಳೂರು, ಏ. ೧೯- ಬಿಬಿಎಂಪಿ ೨೦೧೬-೧೭ನೇ ಸಾಲಿನಲ್ಲಿ ಕಂದಾಯ ಪರಿಷ್ಕರಣೆ ಮಾಡಿರುವ ಕ್ರಮದ ವಿರುದ್ಧ ಬಸವನಗುಡಿ ವಾರ್ಡಿನ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಹೆಚ್ಚಳ ಮಾಡಿರುವ ತೆರಿಗೆಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಪಡಿಸಿದ್ದಾರೆ.
ಎನ್.ಆರ್. ಕಾಲೊನಿಯ ಬೆಂಗಳೂರು ಒನ್ ಕೇಂದ್ರದ ಆವರಣದಲ್ಲಿ ಬಿಬಿಎಂಪಿ ಸದಸ್ಯ ಹಾಗೂ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಏರ್ಪಡಿಸಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ವಾರ್ಡ್‌ನ ಹಿರಿಯ ನಾಗರಿಕರ ಸಂವಾದ ಕಾರ್ಯಕ್ರಮದಲ್ಲಿ ತೆರಿಗೆಯನ್ನು ಹೆಚ್ಚಳ ಮಾಡಿರುವ ಪಾಲಿಕೆಯ ಕ್ರಮ ಸರಿಯಲ್ಲ ಎಂದು ಆರೋಪಿಸಿದರು.
ವಸತಿ ಮನೆಗಳಿಗೆ ಶೇ.೨೦, ವಸತಿಯೇತರ ಕಟ್ಟಡಗಳಿಗೆ ಶೇ.೨೫ರಷ್ಟು ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ.
ವಾಸ್ತವವಾಗಿ ತೆರಿಗೆ ಹೆಚ್ಚಳವು ಶೇ. ೫೦ರಿಂದ ಶೇ.೭೦ರ ವರೆಗೆ ಕಟ್ಟಬೇಕಾಗಿದೆ ಎಂದು ಹಿರಿಯ ನಾಗರಿಕರು ಅಧಿಕಾರಿಗಳ ಎದುರು ಅವಲತ್ತುಕೊಂಡರು.
ಸ್ಥಳೀಯ ನಿವಾಸಿ ಚಾರ್ಟೆಡ್ ಅಕೌಂಟೆಂಟ್ ಸುರೇಶ್ ಅವರು, ಶೇ.೨೦ರಷ್ಟು ತೆರಿಗೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಇದೆ ವೇಳೆ ಎಬಿಸಿಡಿ ವಲಯವನ್ನು ಬದಲು ಮಾಡಲಾಗಿದೆ. ಇದರಿಂದ ತೆರಿಗೆ ದರ ದುಪ್ಪಟ್ಟಾಗಿ ಕಟ್ಟಬೇಕಿದೆ ಎಂದು ದೂರಿದರು.
ಶೇ.೨೦ರಷ್ಟು ಮಾತ್ರವೇ ತೆರಿಗೆ ಕಟ್ಟಬೇಕು. ಯಾವುದೇ ಕಾರಣಕ್ಕೂ ವಲಯಗಳನ್ನು ಬದಲು ಮಾಡಬಾರದು ಎಂದು ಆಗ್ರಹಪಡಿಸಿದರು.
ಎನ್‌ಆರ್ ಕಾಲೋನಿಯ ಸಪ್ತಗಿರಿ ಅಪಾರ್ಟ್‌ಮೆಂಟ್‌ನ ರಾಮಮೂರ್ತಿ ಅವರು ಶೇಕಡ ೨೦ರಂತೆ ನಾನು ಕಟ್ಟಬೇಕಾಗಿರುವುದು ಕೇವಲ ೩ ಸಾವಿರದ ೧೦೦ ಆದರೆ, ಈಗ ನಾನು ಕಟ್ಟಿರುವುದು ೫ ಸಾವಿರದ ೧೦೦ ರೂ. ಅಂದರೆ ಶೇಕಡ ೭೦ರಷ್ಟು ತೆರಿಗೆಯನ್ನು ಕಟ್ಟಿದ್ದೇನೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಬಹುತೇಕ ನಾಗರಿಕರು ತೆರಿಗೆ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವಲಯವಾರು ಬದಲಾವಣೆಯನ್ನು ತೆಗೆದು ಹಾಕಬೇಕು. ಶೇ.೨೦ರಷ್ಟು ಮಾತ್ರವೇ ತೆರಿಗೆಯನ್ನು ಕಟ್ಟಿಸಬೇಕು ಎಂದು ಆಗ್ರಹ ಪಡಿಸಿದರು.
ಪಾಲಿಕೆ ಉಪ ಆಯುಕ್ತ (ಕಂದಾಯ) ವೆಂಕಟಾಚಲಪತಿ ಶ್ರೀ ಮಾತನಾಡಿ, ರಾಜ್ಯ ಸರ್ಕಾರ ಮಾರುಕಟ್ಟೆ ಮಾರ್ಗಸೂಚಿ ದರವನ್ನು ಮೂರು ಬಾರಿ ಹೆಚ್ಚಳ ಮಾಡಿದ್ದರ ಪಾಲಿಕೆ ಕಳೆದ ೧೬ ವರ್ಷಗಳಿಂದ ತೆರಿಗೆಯನ್ನು ಹೆಚ್ಚಳ ಮಾಡಿರಲಿಲ್ಲ. ನಾಗರಿಕರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Write A Comment