ಕರ್ನಾಟಕ

ಶೀಲ ಶಂಕಿಸಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪತಿರಾಯ ಕೆಲವೇ ಗಂಟೆಗಳಲ್ಲಿ ಅರೆಸ್ಟ್

Pinterest LinkedIn Tumblr

murderಗೌರಿಬಿದನೂರು, ಏ.18- ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲಕಾಪುರ ಗ್ರಾಮದ ವಾಸಿ ಗುಲ್ನಾಸ್ (22) ಗಂಡನಿಂದಲೇ ಕೊಲೆಯಾದ ಪತ್ನಿ.

ಘಟನೆ ವಿವರ:
ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಅಲಕಾಪುರ ಗ್ರಾಮದ ಫಕ್ರುದ್ದೀನ್ ಮತ್ತು ನೂರ್‌ಜನ್ ದಂಪತಿ ಪುತ್ರಿ ಗುಲ್ನಾಸ್ ಅದೇ ಗ್ರಾಮದ ಅಲ್ಲಾಬಕಾಶ್ ಮತ್ತು ಸಕೀನಾ ಬೀ ದಂಪತಿ ಪುತ್ರ, ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕಲಂದರ್ ಪ್ರೀತಿಸಿ ವಿವಾಹವಾಗಿದ್ದರು.

ಅದೇ ಗ್ರಾಮದ ಗುಲ್ನಾಸ್ ಮನೆಯ ಬಳಿ ಪರಿಚಯವಿರುವ ರೋಷನ್ ಎಂಬ ಯುವಕನೊಂದಿಗೆ ಗುಲ್ನಾಸ್ ಮೊಬೈಲ್‌ನಲ್ಲಿ ಸಂಪರ್ಕವಿಟ್ಟುಕೊಂಡಿದ್ದು, ಇದು ಗಂಡನಿಗೆ ತಿಳಿದು ಪ್ರತಿನಿತ್ಯ ಗಲಾಟೆಯಾಗುತ್ತಿದ್ದು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಪತ್ನಿ ಮೊಬೈಲ್‌ಗೆ ಬಂದ ಪೋನ್ ಕಾಲ್ ನೋಡಿ ಹಾಗೂ ಗ್ರಾಮದಲ್ಲಿ ರೋಷನ್ ಜತೆ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಗ್ರಾಮದಲ್ಲಿ ಗುಸುಗುಸು ಕೇಳಿಬರುತ್ತಿದ್ದರ ಹಿನ್ನೆಲೆಯಲ್ಲಿ ಕಲಂದರ್ ಪಾನಮತ್ತನಾಗಿ ಮನೆಗೆ ಬಂದು ಊಟ ಮುಗಿಸಿ ಅಂದು ಮಧ್ಯರಾತ್ರಿ 1.30ರ ಸಮಯದಲ್ಲಿ ಪತ್ನಿ ಗಾಢ ನಿದ್ರಾವಸ್ಥೆಯಲ್ಲಿದ್ದಾಗ ದಾರದಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಡಿವೈಎಸ್ಪಿ ಪುರಷೋತ್ತಮ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ವಿ.ಶೇಷಾದ್ರಿ ನೇತೃತ್ವದಲ್ಲಿ ಎಸ್‌ಐ ಸುಂದರ್, ಸಿಬ್ಬಂದಿಗಳಾದ ಸಂಪಂಗಿ, ಮಂಜುನಾಥ್, ಕುಮಾರನಾಯಕ್, ಚಾಲಕರಾದ ಚಂದ್ರಶೇಖರ್ ಸಿರಾಜ್‌ಉಲ್ಲಾರವರು ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಬ್ಬ ಆರೋಪಿ ರೋಷನ್‌ನನ್ನು ಗ್ರಾಮದಲ್ಲಿಯೇ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Write A Comment