ಕರ್ನಾಟಕ

ಮತ್ತೆ ದಲಿತ ಮುಖ್ಯಮಂತ್ರಿ ಸೊಲ್ಲೆತ್ತಿದ ಡಾ.ಪರಮೇಶ್ವರ್

Pinterest LinkedIn Tumblr

Parameshwar-14ಬೆಂಗಳೂರು, ಏ. ೧೭ – ದಲಿತ ಸಮುದಾಯಕ್ಕೆ ರಾಜಕೀಯ ಶಕ್ತಿ ಮತ್ತು ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಹೀಗಾಗಿ ದೇಶದಲ್ಲಿ ಪ್ರಧಾನಿಯಾಗಿಲ್ಲ, ಒಂದಿಬ್ಬರನ್ನು ಹೊರತುಪಡಿಸಿದರೆ ಮುಖ್ಯಮಂತ್ರಿಯಾಗಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಇಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ.
ದಲಿತರನ್ನು ದಲಿತರೇ ವಿಧಾನಸಭೆಯ ಹಾಗೂ ಲೋಕಸಭೆಗೆ ಆಯ್ಕೆ ಮಾಡಿ ಕಳಿಸುವಂತಾಗಬೇಕು ಆಗ ಮಾತ್ರ ಮತ್ತಷ್ಟು ಶಕ್ತಿ ಬರಲಿದೆ.
ದಲಿತರು ಮುಖ್ಯಮಂತ್ರಿಯಾಗಿಲ್ಲ ಎಂದು ಹೇಳಿಕೆ ನೀಡಿದರೆ ಯಾರಾದರೂ ನನ್ನನ್ನು ಟೀಕೆ ಮಾಡಿದರೂ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮೊನ್ನೆಯಷ್ಟೇ ಭೇಟಿ ಮಾಡಿದ ಬಳಿಕ ಪರಮೇಶ್ವರ್ ಈಗ ದಲಿತ ಮುಖ್ಯಮಂತ್ರಿಯ ಪ್ರಸ್ತಾಪ ಮಾಡಿರುವುದು ರಾಜಕೀಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಲಿತರನ್ನು ಇಂದೂ ಸಮಾಜ ನಮ್ಮವರು ಎಂದು ಒಪ್ಪಿಕೊಂಡಿಲ್ಲ. ಹೀಗಾಗಿ ಹಿಂದುಗಳಾಗಿ ಹುಟ್ಟಿರುವುದೇ ದುರದೃಷ್ಟಕರ ಎಂದು ಹೇಳಿದರು.
ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದಾರೆ. ಅವರು ಬದಲಾದರೂ ನಾವಿನ್ನೂ ಬದಲಾಗಿಲ್ಲ. ಸಮಾಜದಲ್ಲಿ ಎಷ್ಟೇ ಮೇಲೆ ಬಂದರೂ ದಲಿತ ಎಂದು ಸಮಾಜ ನಮ್ಮನ್ನು ದಲಿತ ಎಂದು ಕರೆಯುವುದನ್ನು ಬಿಟ್ಟಿಲ್ಲ. ಇದು ಒಂದು ರೀತಿ ನೋವು ಮತ್ತು ಅವಮಾನವಾಗುತ್ತಿದೆ.
ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳಾದರೂ ಅವಮಾನವನ್ನು ಸಹಿಸಿಕೊಳ್ಳಬೇಕಲ್ಲ ಎನ್ನುವ ನೋವು ಇದೆ ಎಂದರು.
ದಲಿತರಾಗಿ ಹುಟ್ಟಿರುವುದೇ ನಮ್ಮ ಸ್ಥಿತಿಗೆ ಕಾರಣವಾಗಿದೆ. ಇದು ದುರದೃಷ್ಟಕರ. ಹಳ್ಳಿಯಲ್ಲಿರುವ ಅದೆಷ್ಟೋ ಮಂದಿ ಅವಮಾನವನ್ನು ಸಹಿಸಿಕೊಂಡು ಬದುಕುತ್ತಿದ್ದಾರೆ. ಆಧುನಿಕ ಜಗತ್ತು ಬಹು ಬೇಗವಾಗಿ ಬೆಳೆಯುತ್ತಿದೆ. ಆದರೂ ಪರಿಸ್ಥಿತಿ ಬದಲಾಗಿಲ್ಲ.
ಹೋಟೆಲ್‌ಗಳಲ್ಲಿ ಕಾಫಿ, ಟೀಗಳಿಗೆ ಹೊರಗಡೆ ಲೋಟಗಳಲ್ಲಿ ಇಟ್ಟಿದ್ದಾರೆ, ಹಳ್ಳಿಗಳಲ್ಲಿ ಕ್ಷೌರ ಮಾಡುತ್ತಿಲ್ಲ ಈ ಸನ್ನಿವೇಶ ಬದಲಾಗದಿದ್ದರೆ ಸಮಾಜ ಮತ್ತು ದೇಶ ದೊಡ್ಡ ಅನಾಹುತವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಅಳುಕು ಬಿಟ್ಟು ಅನಿಸಿಕೆ ಹಂಚಿಕೊಳ್ಳಿ. ದಲಿತನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ. ಅಮೆರಿಕದಲ್ಲಿ `ಕರಿಯಾ’ ಎನ್ನುವ ಕೀಳರಿಮೆ ಇದ್ದರೆ ಒಬಾಮಾ ಅಲ್ಲಿನ ಅಧ್ಯಕ್ಷರಾಗುತ್ತಿರಲಿಲ್ಲ. ಜತೆಗೆ ಅಂಬೇಡ್ಕರ್ ಅವರಿಗೆ ಅಳುಕಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ಊಹಿಸಿ ಎಂದು ಹೇಳಿದರು.
ಅಂಬೇಡ್ಕರ್ ಅವರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ. ಮುಂದಿನ 100 ವರ್ಷಗಳು ಕಳೆದರೂ ಅವರು ಪ್ರಸ್ತುತವಾಗಲಿದ್ದಾರೆ. ದಲಿತರ ಪ್ರತಿನಿಧಿಗಳನ್ನು ದಲಿತರೇ ಆಯ್ಕೆ ಮಾಡುವಂತಹ ಪರಿಸ್ಥಿತಿ ಬರಬೇಕು ಎಂದು ಹೇಳಿದರು.
ದಲಿತ ಎನ್ನುವ ನೆಪವೊಡ್ಡಿ ಹಿಂದೂಗಳಲ್ಲಿದ್ದರೂ ನಮ್ಮನ್ನು ಹಿಂದೂಗಳಂತೆ ಕಾಣುತ್ತಿಲ್ಲ. ಹಿಂದೂಗಳಾಗಿ ಹುಟ್ಟಿರುವುದೇ ದುರದೃಷ್ಟಕರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿನಯಾ ರಕ್ಕಿತ ಬಂತೇಜಿ, ಸಂಗದತ್ತ ಬಂಜೇಜಿ, ಡಾ. ಪಿ.ಡಿ. ಸತ್ಯಪಾಲ್, ಡಿ. ತಂಗರಾಜು, ಧನಲಕ್ಷ್ಮಿ ಬಸವರಾಜ್ ಸೇರಿದಂತೆ ಅನೇಕರಿದ್ದರು.

Write A Comment