ಕರ್ನಾಟಕ

ಬಡವರಿಗೆ ತಲಾ ಐದು ಎಕರೆ ಭೂಮಿ ನೀಡುವ ಕಾನೂನು ಜಾರಿಗೆಗೆ ಹೋರಾಟ : ದೊರೆಸ್ವಾಮಿ

Pinterest LinkedIn Tumblr

doಬೆಂಗಳೂರು,ಏ.16-ರಾಜ್ಯದಲ್ಲಿ ಎಲ್ಲ ಬಡವರಿಗೂ ತಲಾ ಐದು ಎಕರೆ ಭೂಮಿ ನೀಡುವ ಕಾನೂನು ಜಾರಿಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ. ಶಾಸಕರ ಭವನದಲ್ಲಿಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ಎಚ್.ಎಸ್.ದೊರೆಸ್ವಾಮಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹೋರಾಟಕ್ಕಾಗಿ ಎರಡು ಸಾವಿರ ಯುವಕರು ಮುಂದಾಗಿದ್ದಾರೆ. ಸದ್ಯದಲ್ಲೇ ಹೋರಾಟ ಆರಂಭವಾಗಲಿದೆ ಎಂದು ಹೇಳಿದರು.

ಕೇವಲ ಒಂದರಿಂದ ಎರಡು ಎಕರೆ ಭೂಮಿ ಇರುವ ಬಡವರಿಗೂ ಐದು ಎಕರೆ ಭೂಮಿ ನೀಡಬೇಕು. ಒಂದು ಅಥವಾ ಎರಡು ಎಕರೆಯಿಂದ ಅವರಿಗೆ ಏನೂ ಉಪಯೋಗವಿಲ್ಲ. ಹಾಗಾಗಿ ಕನಿಷ್ಟ ಐದು ಎಕರೆ ಭೂಮಿಯನ್ನು ಷರತ್ತು ಬದ್ಧವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಭೂಮಿ ಪಡೆದ ಫಲಾನುಭವಿಗಳು ಮಾರಾಟ ಮಾಡಬಾರದು. ಈ ಭೂಮಿಯನ್ನು ವ್ಯವಸಾಯಕ್ಕೆ ಬಳಸಬೇಕು. ಎರಡು ವರ್ಷಗಳ ಕಾಲ ವ್ಯವಸಾಯ ಮಾಡದೇ ಹಾಗೇ ಬಿಟ್ಟಿದ್ದರೆ ಆ ಭೂಮಿಯನ್ನು ಸರ್ಕಾರ ಹಿಂಪಡೆಯಬೇಕು ಎಂಬ ನಿಯಮಗಳೊಂದಿಗೆ ಭೂಮಿ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅವರು ಸ್ಪಂದಿಸದಿದ್ದಲ್ಲಿ ದೇವರಾಜು ಅರಸು ಜನ್ಮ ಶತಮಾನೋತ್ಸವದ ದಿನದಿಂದ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ರಾಜಕೀಯ ಪಕ್ಷಗಳ ಶುದ್ಧೀಕರಣ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಭವಿಷ್ಯದಲ್ಲಿ ಹಣವಂತರಲ್ಲದಿದ್ದರೂ ಗುಣವಂತರನ್ನು, ನಿಷ್ಠಾವಂತರಿಗೆ ಟಿಕೆಟ್ ನೀಡಬೇಕು ಆಗಮಾತ್ರ ಇಂತಹ ಹೋರಾಟಗಳಿಗೆ ಅರ್ಥ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.ಸಂಸತ್‌ನಲ್ಲಿ ಶೇ.40ರಷ್ಟು ವಿಧಾನಸಭೆಯಲ್ಲಿ ಶೇ.38ರಷ್ಟು ಕ್ರಿಮಿನಲ್‌ಗಳಿದ್ದಾರೆ. ಇಂಥ ಪರಿಸ್ಥಿತಿಯಿಂದ ನಾವು ಹೊರಬರಬೇಕಿದೆ ಎಂದರು. ಜಿಲ್ಲಾಧಿಕಾರಿಗಳು ಸ್ಮಶಾನ, ಗೋಮಾಳವಿದ್ದ 50 ಸಾವಿರ ಎಕರೆ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇದರ ವಿರುದ್ಧವೂ ಹೋರಾಟ ನಡೆಸಲಿದ್ದೇವೆ ಎಂದ ಅವರು, ಇಲ್ಲಿಯವರೆಗೆ ಯಶಸ್ವಿ ಹೋರಾಟ ನಡೆಸಿದ್ದೇನೆ. ಮುಂದೆಯೂ ಹೋರಾಟ ನಡೆಸುತ್ತೇನೆ.

ಎಷ್ಟು ವರ್ಷ ಬದುಕುತ್ತೇನೆ ಎಂಬುದು ಗೊತ್ತಿಲ್ಲ. ಆದರೆ 50 ವರ್ಷ ಬದುಕಬೇಕೆಂಬ ಆಸೆಯಿದೆ. ನಮ್ಮ ಹೋರಾಟಗಳು ಯಶಸ್ವಿಯಾದಾಗಲೇ ಸಾರ್ಥಕ. ನಮ್ಮ ಹೋರಾಟಗಳ ಫಲವಾಗಿಯೇ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿದೆ ಎಂದು ನುಡಿದರು. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಎ.ಟಿ.ರಾಮಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೂ ಕಬಳಿಕೆ ವಿರೋಧಿಸಿ ಮಾಡಿದ ಹೋರಾಟದ ಫಲವಾಗಿ ಇಂದು ವಿಶೇಷ ನ್ಯಾಯಾಲಯವೇನೋ ಸ್ಥಾಪನೆಯಾಗಿದೆ. ಆದರೆ ಆಡಳಿತಾತ್ಮಕ ವಿಭಾಗ ರಚನೆಯಾಗಿಲ್ಲ. ಕೂಡಲೇ ದಕ್ಷ , ಯುವ ಉತ್ಸಾಹಿಗಳನ್ನು ನೇಮಿಸುವ ಮೂಲಕ ಜನಪರವಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಜನರ ಬಗ್ಗೆ ಕಾಳಜಿ ಇರುವ ಅಭಿಯೋಜಕರು, ನ್ಯಾಷನಲ್ ಲಾ ಕಾಲೇಜಿನ ಆಯ್ದ ವಿದ್ಯಾರ್ಥಿಗಳನ್ನು ನೇಮಿಸಿ ಪರಿಣಾಮಕಾರಿ ಕೆಲಸ ನಡೆಯುವಂತೆ ನೋಡಿಕೊಳ್ಳಬೇಕು, ಭೂ ಕಬಳಿಕೆದಾರರ ವಿರುದ್ಧ ಕ್ರಮ ವಹಿಸಬೇಕು. ಆದರೆ ಸಣ್ಣ ಪ್ರಮಾಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸವಾಗಬಾರದು ಎಂದು ಅಭಿಪ್ರಾಯಪಟ್ಟರು. ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ 98 ವರ್ಷಕ್ಕೆ ಕಾಲಿಟ್ಟ ದೊರೆಸ್ವಾಮಿಯವರಿಗೆ ಸನ್ಮಾನಿಸಲಾಯಿತು.

Write A Comment