ಕರ್ನಾಟಕ

ಜೆಡಿಎಸ್ ಶಾಸಕಾಂಗ ಸಭೆ : ಪಕ್ಷ ಸಂಘಟಿಸುವ ಕುರಿತು ಶಾಸಕರಿಗೆ ಎಚ್ ಡಿ ಕೆ ಸಲಹೆ

Pinterest LinkedIn Tumblr

jdsಮೈಸೂರು, ಏ.16-ಬನ್ನೂರು ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿಂದು ನಡೆದ ಜೆಡಿಎಸ್ ಶಾಸಕಾಂಗ ಸಭೆ ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿತ್ತು. ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಸಭೆಗೆ ಬಹುತೇಕ ಎಲ್ಲಾ ಶಾಸಕರು ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಕೆಲವರು ಮಧ್ಯಾಹ್ನವಾದರೂ ಬಾರದಿದ್ದಾಗ ದೂರವಾಣಿ ಕರೆ ಮಾಡಿ ಅವರನ್ನು ಕರೆಸಿಕೊಳ್ಳಲಾಯಿತು. ಪ್ರಮುಖವಾಗಿ ಇಂದು ಶಾಸಕರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಲು ಪ್ರಯತ್ನಿಸಲಾಯಿತು. ಆದರೆ, ಪ್ರಸ್ತುತ ಜಿಪಂ, ತಾಪಂಯಲ್ಲಿ ಯಾರ ಜತೆ ಮೈತ್ರಿಗೆ ಹೋಗಬೇಕು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಂದಾದರು.

ಇದಕ್ಕೆ ಕೆಲ ಶಾಸಕರು ವಿಭಿನ್ನ ನಿಲುವುಗಳನ್ನು ತಳೆದ ಹಿನ್ನೆಲೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಕಷ್ಟು ಪ್ರಯಾಸ ಪಡಬೇಕಾಯಿತು. ಹಲವು ತಿಂಗಳುಗಳ ನಂತರ ಇಂದು ಕರೆದ ಸಭೆಯಲ್ಲಿ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲೇ ಸಭೆ ಕರೆಯಬಹುದಾಗಿತ್ತು. ಆದರೆ, ಇಲ್ಲಿ ನಡೆಸುವ ಉದ್ದೇಶ ಏನಿತ್ತು? ವಿಧಾನಮಂಡಲ ಅಧಿವೇಶನ ನಡೆಯುವಾಗಲೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಒಮ್ಮೆಯೂ ಸಭೆ ಕರೆಯಲಿಲ್ಲ ಎಂದು ಕುಮಾರಸ್ವಾಮಿ ಅವರ ನಿಲುವಿಗೆ ಬೇಸರ ವ್ಯಕ್ತಪಡಿಸಲಾಯಿತು.

ಇದಲ್ಲದೆ, ಕೆಲವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾಧ್ಯಮಗಳ ಮಾಹಿತಿ ಹಿನ್ನೆಲೆಯಲ್ಲಿ ಪ್ರಮುಖವಾಗಿ ಇಂದು ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಪುಟ್ಟಣ್ಣ ಮತ್ತಿತರರು ಸಮಜಾಯಿಷಿ ನೀಡಿದರು. ನೀವು ನಮ್ಮ ನಾಯಕರು. ನಾವು ಪಕ್ಷ ತೊರೆಯುವಂತಹ ಯಾವುದೇ ನಿರ್ಧಾರ ಮಾಡಿಲ್ಲ. ಜೆಡಿಎಸ್‌ನೊಂದಿಗೆ ನಾವಿದ್ದೇವೆ. ಆತಂಕ ಪಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವ ಕುರಿತಂತೆ ಶಾಸಕರಿಗೆ ಕುಮಾರಸ್ವಾಮಿ ಹಲವು ಸಲಹೆಗಳನ್ನು ಕೂಡ ಇದೇ ಸಂದರ್ಭದಲ್ಲಿ ನೀಡಿದರು ಎಂದು ತಿಳಿದು ಬಂದಿದೆ.

Write A Comment