ಕರ್ನಾಟಕ

ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದು, ಶೀಘ್ರವೇ ಆರಂಭ : ಡಾ.ರಾಮೇಗೌಡ

Pinterest LinkedIn Tumblr

pucಬೆಂಗಳೂರು, ಏ.16-ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದು, ಮೌಲ್ಯಮಾಪನ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ಡಾ.ರಾಮೇಗೌಡ ಇಂದು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಇಂದು ಸಂಜೆಯೊಳಗಾಗಿ ಮುಷ್ಕರ ನಿರತ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಖಾಸಗಿ ಕಾಲೇಜುಗಳ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸಲು ಎಲ್ಲಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಪತ್ರಿಕೆಗಳ ಕೋಡಿಂಗ್ ಮತ್ತು ಡಿ-ಕೋಡಿಂಗ್ ಸಮಸ್ಯೆ ಇದ್ದುದ್ದರಿಂದ ಇದುವರೆಗೆ ಈ ಬಗ್ಗೆ ಮುಂದುವರೆಯಲಾಗಿರಲಿಲ್ಲ. ಆದರೆ ಖಾಸಗಿ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಿ ಡಿ-ಕೋಡಿಂಗ್ ಮಾಡಲು ಪ್ರಾರಂಭಿಸಲಾಗಿದೆ. 46 ಕೇಂದ್ರಗಳಲ್ಲಿ ಡಿ-ಕೋಡಿಂಗ್ ಕಾರ್ಯ ನಡೆಯುತ್ತಿದ್ದು, ಇಂದು ಮತ್ತು ನಾಳೆ ಪೂರ್ಣಗೊಳ್ಳಲಿದೆ. ಡಿ-ಕೋಡಿಂಗ್ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಆರಂಭವಾಗಲಿದೆ. ಇದಕ್ಕಾಗಿ ಖಾಸಗಿ ಪದವಿಪೂರ್ವ ಕಾಲೇಜುಗಳ 7 ಸಾವಿರ ಮಂದಿ ಉಪನ್ಯಾಸಕರನ್ನು ಸಜ್ಜುಗೊಳಿಸಿದ್ದು, ಅವರು ಮೌಲ್ಯಮಾಪನ ನಡೆಸಿಕೊಡಲಿದ್ದಾರೆ.

ಮುಷ್ಕರ ನಿರತ ಉಪನ್ಯಾಸಕರ ಸಂಘದ ಮುಖ್ಯಸ್ಥರ ಜೊತೆ ಮಾತುಕತೆ ಮುಂದುವರೆದಿದ್ದು, ಇಂದು ಸಂಜೆ ವೇಳೆಗೆ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ಇದಕ್ಕೆ ಒಪ್ಪದಿದ್ದರೆ ಮೌಲ್ಯಮಾಪನ ಕಾರ್ಯ ನಿಲ್ಲುವುದಿಲ್ಲ ಎಂದು ರಾಮೇಗೌಡ ಸ್ಪಷ್ಟಪಡಿಸಿದ್ದಾರೆ.

Write A Comment