ಕರ್ನಾಟಕ

ರಾಜ್ಯದ ಎಲ್ಲೆಡೆ ಶ್ರದ್ಧಾ ಭಕ್ತಿಗಳಿಂದ ರಾಮನವಮಿ

Pinterest LinkedIn Tumblr

navami

ಬೆಂಗಳೂರು: ರಾಜ್ಯದೆಲ್ಲೆಡೆ ಭಕ್ತಾದಿಗಳು ಇಂದು ಶ್ರೀ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಸಂಪಂಗಿರಾಮಸ್ವಾಮಿ ದೇವಾಲಯ, ನಂದಿದುರ್ಗ ರಸ್ತೆಯಲ್ಲಿರುವ ರಸ್ತೆಯಲ್ಲಿರುವ ಬಂಡೆ ಶ್ರೀ ಸತ್ಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಟಿ.ದಾಸರಹಳ್ಳಿಯ ರಾಮ ಮಂದಿರ ಸೇರಿದಂತೆ ನಾನಾ ಕಡೆ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಮಹೋತ್ಸವಗಳು ಜರುಗಿದವು.

ಸಂಪಂಗಿರಾಮಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಆರು

ಗಂಟೆಗೆ ಅಭಿಷೇಕ, ಮಹಾ ಸುದರ್ಶನ ಹೋಮ, ರಾಮತಾರಕ ಹೋಮ, ರಾಮಾಯಣ ಪಾರಾಯಣ, ವೇದ ಮತ್ತು ಪ್ರಬಂಧ ಪಾರಾಯಣ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಮಹಾಮಂಗಳಾರತಿ ನೆರವೇರಿದವು.

ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ರಾಮಸ್ವಾಮಿ ದರ್ಶನ ಪಡೆದು ಪುನೀತರಾದರು. ಅಲ್ಲದೇ ಭಕ್ತರಿಗೆ ಪಾನಕ, ಮಜ್ಜಿಗೆ,ಕೊಸಂಬರಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಮತ್ತೊಂದೆಡೆ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಬಂಡೆ ಶ್ರೀ ಸತ್ಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಕೂಡ ಶ್ರೀರಾಮನವಮಿ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀರಾಮದೇವರಿಗೆ ಸುವರ್ಣ ಕವಚ ಅಲಂಕಾರ ಮಾಡಲಾಗಿತ್ತು.

ರಸ್ತೆಗಳಲ್ಲಿ ರಾಮನವಮಿ

ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರೂ ಕೂಡಾ ರಾಮನವಮಿ ಆಚರಿಸಿದರು. ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸೇರಿ ಪಾನಕ ವಿತರಿಸಿದರು. ಹಳೇ ಬಸ್ ನಿಲ್ದಾಣದ ಸಮೀಪ ರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಲಾಯಿತು. ಶ್ರೀರಾಮನ ಆದರ್ಶ ಗುಣಗಳು ಇಂದಿನವರಿಗೆ ಮಾದರಿಯಾಗಬೇಕು. ಅವನ ಪಿತೃವಾಕ್ಯ ಪರಿಪಾಲನೆ, ತ್ಯಾಗ ಮನೋಭಾವ ಎಲ್ಲವನ್ನೂ ಇಂದಿನವರೂ ಅಳವಡಿಸಿಕೊಳ್ಳಬೇಕು. ಅಂಥ ಮೌಲ್ಯಗಳನ್ನು ಸ್ಮರಿಸುವ ಉದ್ದೇಶದಿಂದ ರಾಮನವಮಿಯನ್ನು ಆಚರಿಸಲಾಗುತ್ತಿದೆ ಎಂದು ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರೊಬ್ಬರು ತಿಳಿಸಿದರು.

ಇದೇ ವೇಳೆ ಕೆಲ ವರ್ಗದ ಭಕ್ತಾದಿಗಳು ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರುಗಳ ಪ್ರತಿಮೆಗಳನ್ನು ರಥದಲ್ಲಿ ಸಿಂಗರಿಸಿ ಪ್ರತಿಷ್ಟಾಪಿಸಿ ಬೀದಿಯ ಉದ್ದಕ್ಕೂ ಮೆರವಣಿಗೆಯಲ್ಲಿ ರಥವನ್ನು ಕೊಂಡ್ಯಯ್ದು ಸಂಭ್ರಮಿಸಿದರು.

ದೇಶಾದ್ಯಂತ ಸಂಭ್ರಮ

ದೇಶಾದ್ಯಂತ ಸಂಭ್ರಮ ಸಡಗರದಿಂದ ರಾಮನವಮಿಯನ್ನು ಆಚರಿಸುತ್ತಾರೆ. ಅದರಲ್ಲೂ ಭಾರತದ ಉತ್ತರ ಕಡೆಗಳಲ್ಲಿ ರಾಮನವಮಿಯನ್ನು ಭರ್ಜರಿಯಾಗಿ ಆಚರಿಸುತ್ತಾರೆ. ಶಾಸನಗಳ ರಾಮ ಜನಿಸಿದರೆಂದು ಪ್ರತೀತಿ ಇರುವ ಆಯೋಧ್ಯಾ ಮತ್ತು ಕೆಲವು ಪ್ರದೇಶಗಳಲ್ಲಿ ರಾಮನವಮಿ ಹಬ್ಬವನ್ನು ಜೋರಾಗಿಯೇ ನಡೆಸುತ್ತಾರೆ.

ಉದಿಸುತ್ತಿರುವ ಸೂರ್ಯನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಹಬ್ಬದ ದಿನ ಪ್ರಾರಂಭಗೊಳ್ಳುತ್ತದೆ. ರಾಮ ದೇವರ ಪೂರ್ವಜರು ಎಂದು ಸೂರ್ಯ ದೇವರನ್ನು ನಂಬುತ್ತಾರೆ. ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ರಾಮನವಮಿಯಂದು ಮುಖ್ಯವಾಗಿರುತ್ತದೆ.

ರಾಮ ದೇವರ ಸ್ತೋತ್ರಗಳು, ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯವನ್ನು ನಾವು ಈ ದಿನ ಮಾಡಬೇಕು. ಸೂರ್ಯಸ್ತದ ನಂತರವಷ್ಟೇ ವೃತಾಚರಣೆ ಮುಕ್ತಾಯಗೊಳ್ಳುತ್ತದೆ.

ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಿಸುತ್ತಾರೆ. ಆದರೆ ದಕ್ಷಿಣದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಿಸುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ. ಆದರೆ ರಾಮದೇವರ ಮಹಿಮೆಯನ್ನು ತಿಳಿಸುವ ಈ ಹಬ್ಬ ಶಾಂತಿಯ ಸಂಕೇತವಾಗಿದೆ. ಕೆಟ್ಟ ಶಕ್ತಿಗಳು, ಕೆಟ್ಟ ವಾತಾವರಣ ಹಬ್ಬದ ಆಚರಣೆಯಿಂದ ದೂರಾಗುತ್ತದೆ.

Write A Comment