ಕರ್ನಾಟಕ

ಉಪನ್ಯಾಸಕರ ಅವಿರತ ಮುಷ್ಕರ; ಅಸ್ವಸ್ಥ ಇಬ್ಬರು ಆಸ್ಪತ್ರೆಗೆ

Pinterest LinkedIn Tumblr

SUJATHA PRINCIAL OF GOVT PUC COLLEGE RAMNAGAR WAS COLLASPED DURING HUNGAR STIKE AND TAKKEN TO HOSPITAL DURING PUC COLLEGE STRIKE AT FREEDOM PARK

ಬೆಂಗಳೂರು: ವೇತನ ತರತಮ್ಯ ನಿವಾರಣೆಗೆ ಒತ್ತಾಯಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದು, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ಉಪನ್ಯಾಸಕರು ತೀವ್ರ ಅಸ್ವಸ್ತರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ರಾಮನಗರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಜಾತಾ ಹಾಗೂ ಕೆಆರ್‌ಪುರಂನ ಸರ್ಕಾರಿ ಕಾಲೇಜಿನ ಉಪನ್ಯಾಸಕ ರಮೇಶ್ ಅವರು ತೀವ್ರ ಅಸ್ವಸ್ತರಾಗಿದ್ದರು. ಕೂಡಲೇ 108 ಆಂಬ್ಯೂಲೆನ್ಸ್ ಮೂಲಕ ಅವರನ್ನು ಎಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇಂದು ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.

ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ನಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಇಷ್ಟೊಂದು ಮೀನಾಮೇಷ ಎಣಿಸುತ್ತಿರುವುದು ಯಾಕಾಗಿ ಎಂಬುದು ಗೊತ್ತಾಗುತ್ತಿಲ್ಲ. ಮೌಲ್ಯಮಾಪನ ತಮಾಷೆಯ ವಿಷಯವಲ್ಲ. ಕನಿಷ್ಠ 5 ವರ್ಷಗಳ ಅನುಭವಗಳಾದರೂ ಇರಬೇಕು. ಅದಕ್ಕಿಂತ ಕಡಿಮೆ ಅನುಭವ ಇರುವವರನ್ನು ಮೌಲ್ಯಮಾಪನಕ್ಕೆ ಬಳಸಿಕೊಂಡರೆ ಅದು ವಿದ್ಯಾರ್ಥಿಗಳ ಜೀವನದ ಮೇಲೆ ಚೆಲ್ಲಾಟವಾಡಿದಂತಾಗುತ್ತದೆ. ಅನುಭವ ಇರುವ ಶಿಕ್ಷಕರಿಂದಲೇ ಮೌಲ್ಯಮಾಪನ ಸಂದರ್ಭದಲ್ಲಿ ತಪ್ಪುಗಳಾಗುತ್ತವೆ. ಇನ್ನು ಅನಾನುಭವಿ ಶಿಕ್ಷಕರಿಂದ ಯಾವ ರೀತಿಯ ಮೌಲ್ಯಮಾಪನ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಮಕ್ಕಳ ಹಿತದೃಷ್ಟಿಯಿಂದಲಾದರೂ ಸರ್ಕಾರ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಅನುದಾನಿತ ಉಪನ್ಯಾಸಕರು ಭಾಗಿ

ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಗೆ ಖಾಸಗಿ ಅನುದಾನಿತ ಉಪನ್ಯಾಸಕರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ಭಾಗವಹಿಸಿದೆ.

ಸಂಘದ ಅಧ್ಯಕ್ಷ ರಾಜಗೋಪಾಲ್ ಮಾತನಾಡಿ, ಖಾಸಗಿ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸುತ್ತೇವೆ ಎಂದು ಸರ್ಕಾರ ಹೇಳುತ್ತಿವೆ. ಆದರೆ, ನಮ್ಮ ಸಂಘದ ಯಾರೊಬ್ಬರೂ ಮೌಲ್ಯಮಾಪನದಲ್ಲಿ ಭಾಗವಹಿಸುತ್ತಿಲ್ಲ. ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ನಿವೃತ್ತ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸಿದರೆ ಫಲಿತಾಂಶದಲ್ಲಿ ಏರುಪೇರಾಗಲಿದೆ ಎಂದು ಎಚ್ಚರಿಸಿದ ಅವರು, ಸರ್ಕಾರ ತಕ್ಷಣ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಿ ಸುಗಮವಾಗಿ ಮೌಲ್ಯಮಾಪನ ನ‌ಡೆಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ನಡೆಯದ ಕೋಡಿಂಗ್ – ಡಿ ಕೋಡಿಂಗ್

ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಇಂದಿನಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ ಎಂದು ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ನಿನ್ನೆ ಸ್ಪಷ್ಟಪಡಿಸಿದ್ದರು.

ಆದರೆ, ಕೋಡಿಂಗ್ ಮತ್ತು ಡಿ ಕೋಡಿಂಗ್ ಪ್ರಕ್ರಿಯೆಗೆ ನಿಗದಿಪಡಿಸಲಾಗಿದ್ದ ನಗರದ ಕೆಲವು ಕಾಲೇಜುಗಳಿಗೆ 11 ಗಂಟೆಯಾದರೂ ಮೌಲ್ಯಮಾಪನ ಮಾಡಬೇಕಾಗಿದ್ದ ಉಪನ್ಯಾಸಕರು ಹಾಜರಾಗಿರಲಿಲ್ಲ. ಇದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, `ಪರ್ಯಾಯ ವ್ಯವಸ್ಥೆ’ ಎಂಬುದು ಕೇವಲ ಸುಳ್ಳಿನ ಕಂತೆಯಾಗಿದೆ ಎಂದು ಉಪನ್ಯಾಸಕರೊಬ್ಬರು ವ್ಯಂಗ್ಯವಾಡಿದರು.

ಹಲವು ದಿನಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಉಪನ್ಯಾಸಕರು ಅಸ್ವಸ್ತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Write A Comment