ಕರ್ನಾಟಕ

2ನೇ ಬಾರಿ ಪ್ರಶ್ನೆ ಪತ್ರಿಕೆ ಲೀಕ್‌ ಮಾಡಿದ್ದು ಪಿಎಚ್‌ಡಿ ವಿದ್ಯಾರ್ಥಿ

Pinterest LinkedIn Tumblr

big-2ಬೆಂಗಳೂರು: ಮಾರ್ಚ್‌ 31ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದಿನ ಪ್ರಮುಖ ಆರೋಪಿ ಯಾರು ಎಂಬ ಸುಳಿವು ದೊರ ಕಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ (ಪಿಎಚ್‌ಡಿ) ವಿದ್ಯಾರ್ಥಿಯೊಬ್ಬ ಈ ಹಗರಣದ ಮೂಲ ವ್ಯಕ್ತಿ ಎಂಬ ವಿಷಯ ಬೆಳಕಿಗೆ ಬಂದಿದೆ.

ರಸಾಯನ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಮಾ. 22ರಂದು ನಿಗದಿಯಾಗಿದ್ದ ಪರೀಕ್ಷೆ ಮತ್ತು ಮಾ. 31ರಂದು ನಿಗದಿಯಾಗಿದ್ದ ಮರು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಆರೋಪಿ ಶಿವಕುಮಾರಸ್ವಾಮಿಯಾಗಿದ್ದರೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಶಿವಕುಮಾರಸ್ವಾಮಿಯಿಂದ ಪಡೆದು ಸೋರಿಕೆ ಮಾಡಿದ್ದು ಜ್ಞಾನಭಾರತಿ ಆವರಣದ ಪಿಎಚ್‌ಡಿ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ನೆಲೆಸಿರುವ ಮೈಸೂರು ಮೂಲದ ವಿದ್ಯಾರ್ಥಿ ನಾಗೇಂದ್ರ.

ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸು ತ್ತಿರುವ ಸಿಐಡಿ ಪೊಲೀಸರು ಈ ಅಂಶವನ್ನು ಪತ್ತೆ ಹಚ್ಚಿದ್ದು, ಆರೋಪಿ ನಾಗೇಂದ್ರ ತಲೆಮರೆಸಿಕೊಂಡಿ ದ್ದಾನೆ. ಆತನಿಂದ ಪ್ರಶ್ನೆಪತ್ರಿಕೆ ಪಡೆದು ಮಾರಾಟ ಮಾಡಿದ್ದ ಉಲ್ಲಾಳದ ನಿವಾಸಿ, ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ಕುಮಾರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಎರಡೂ ಬಾರಿ ಆರೋಪಿಗಳಿಗೆ ಪ್ರಶ್ನೆಪತ್ರಿಕೆ ಒದಗಿಸಿದ್ದು ಮಾತ್ರ ಶಿವಕುಮಾರಸ್ವಾಮಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಮೊದಲ ಬಾರಿಯೂ ಶಾಮೀಲಾಗಿದ್ದ: ಮೊದಲ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ಸರಕಾರ ಮರು ಪರೀಕ್ಷೆ ನಿಗದಿಪಡಿಸಿತ್ತಲ್ಲದೆ, ಸೋರಿಕೆ ಕುರಿತ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮೊದಲ ಪ್ರಕರಣದಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಎರಡನೇ ಬಾರಿ ಎಚ್ಚರಿಕೆಯಿಂದ ಇತ್ತು. ಜತೆಗೆ ಸಿಐಡಿ ತನಿಖೆಯೂ ನಡೆಯುತ್ತಿತ್ತು. ಇದರ ನಡುವೆಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಸಿಐಡಿ ಪೊಲೀಸರಿಗೆ ಸವಾಲು ತಂದೊಡ್ಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯ ಆಳಕ್ಕಿಳಿದ ಸಿಐಡಿ ಪೊಲೀಸರಿಗೆ ಎರಡನೇ ಬಾರಿ ಸೋರಿಕೆಗೆ ಕಾರಣನಾದ ವ್ಯಕ್ತಿ ನಾಗೇಂದ್ರ ಎಂದು ಗೊತ್ತಾಗಿದೆ.

“ಕ್ವಶ್ಚನ್‌ ಪೇಪರ್‌ ಕಿಂಗ್‌’ ಶಿವಕುಮಾರಸ್ವಾಮಿ ಜತೆ ನಿಕಟ ಸ್ನೇಹದಲ್ಲಿದ್ದ ನಾಗೇಂದ್ರ, ಆತನಿಂದ ಎರಡನೇ ಬಾರಿ ಪ್ರಶ್ನೆ ಪತ್ರಿಕೆ ಪಡೆದು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಶಿವಕುಮಾರಸ್ವಾಮಿ ಜೊತೆ ನಾಗೇಂದ್ರನ ಸಖ್ಯ ಬೆಳೆದಿದ್ದು ಹೇಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಮೊದಲ ಬಾರಿ ಪ್ರಶ್ನೆ ಪತ್ರಿಕೆ ಬಯಲಾದ ಪ್ರಕರಣದಲ್ಲಿ ಮಂಜುನಾಥ್‌ ಪ್ರಮುಖ ಆರೋಪಿ ಎಂದು ಹೇಳಲಾಯಿತಾದರೂ ತನಿಖೆ ಮುಂದುವರಿದಂತೆ ಅದರಲ್ಲಿ ನಾಗೇಂದ್ರ ಸೇರಿದಂತೆ ಇನ್ನೂ ಕೆಲವರು ಶಾಮೀಲಾಗಿರುವುದು ಗೊತ್ತಾಯಿತು. ಇದೇ ಸುಳಿವು ಹಿಡಿದು ತನಿಖೆ ಮುಂದುವರಿಸಿದಾಗ ಎರಡನೇ ಬಾರಿಯ ಸೋರಿಕೆಯಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದು ಬೆಳಕಿಗೆ ಬಂತು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಜ್ಞಾನಭಾರತಿ ಬಳಿ ಟ್ಯುಟೋರಿಯಲ್‌ ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವೀಧರ ನಾಗಿರುವ ನಾಗೇಂದ್ರ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ. ಬೆಂಗಳೂರು ವಿವಿಯಲ್ಲಿ ಸ್ನಾತ ಕೋತ್ತರ ಪದವಿ ಮುಗಿಸಿದ ಆತ ಬಳಿಕ ಅಲ್ಲೇ ಪಿಎಚ್‌.ಡಿ. ಪ್ರವೇಶ ಪಡೆದಿದ್ದ. ಅಲ್ಲದೆ, ತನ್ನ ನಾಲ್ಕೈದು ಮಂದಿ ಸ್ನೇಹಿತರ ಜತೆಗೂಡಿ ಜ್ಞಾನಭಾರತಿ ಸಮೀಪ ಟ್ಯುಟೋರಿಯಲ್‌ ಆರಂಭಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗೇಂದ್ರನ ಟ್ಯುಟೋರಿಯಲ್‌ನಲ್ಲಿ ಉಲ್ಲಾಳದ ರಿಯಲ್‌ ಎಸ್ಟೇಟ್‌ ಉದ್ಯಮಿ ಅನಿಲ್‌ ಕುಮಾರ್‌ ಅವರ ಪುತ್ರ ವಿದ್ಯಾರ್ಥಿಯಾಗಿದ್ದು, ಈ ಪರಿಚಯದಲ್ಲೇ ಅನಿಲ್‌ ಪುತ್ರನಿಂದ 10 ಸಾವಿರ ರೂ. ಪಡೆದು ನಾಗೇಂದ್ರ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದ. ಆದರೆ, ಶಿವಕುಮಾರಸ್ವಾಮಿ ಮತ್ತು ನಾಗೇಂದ್ರನ ಗೆಳೆತನ ಹೇಗಾಯಿತು ಎಂಬುದು ಗೊತ್ತಾಗಿಲ್ಲ. ಆದರೆ, ಹಲವು ದಿನಗಳಿಂದ ಅವರಿಬ್ಬರೂ ನಿರಂತರ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಖಚಿತವಾಗಿದೆ.

ಈ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ ಕಳೆದ ವಾರ ನಾಗೇಂದ್ರನ ಟ್ಯುಟೋರಿಯಲ್‌ ಹಾಗೂ ಆತ ವಾಸವಾಗಿರುವ ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸಲಾಗಿದೆ. ಮೈಸೂರಿನಲ್ಲೂ ತನಿಖೆ ನಡೆಸಲಾಗಿದೆ. ಆದರೆ, ಕೃತ್ಯ ಬಯಲಾದ ಅನಂತರ ನಾಗೇಂದ್ರ ತಲೆಮರೆಸಿಕೊಂಡಿದ್ದಾನೆ. ಹಾಗೆಯೇ ಶಿವಕುಮಾರಸ್ವಾಮಿ ಜತೆ ಆತನದ್ದು ದೊಡ್ಡಮಟ್ಟದ ಹಣಕಾಸು ವ್ಯವಹಾರ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-ಉದಯವಾಣಿ

Write A Comment