ಮನೋರಂಜನೆ

ಇದು ಅಪ್ಪಟ ಹೊಸ ಬರ ವಾರ : 4 ಚಿತ್ರಗಳು ತೆರೆಗೆ

Pinterest LinkedIn Tumblr

filmಮಾರ್ಚ್‌ ಕೊನೆಯ ವಾರದವರೆಗೆ ಸಿನಿಮಾ ಮೇಲೆ ಸಿನಿಮಾಗಳು ಬಿಡುಗಡೆಯಾಗುತ್ತಲೆ ಬಂದುವು. ವಾರಕ್ಕೆ ಐದಾರು ಸಿನಿಮಾಗಳು ತೆರೆಗಪ್ಪಳಿಸಿ ಬಿಡುಗಡೆ ಶಾಸ್ತ್ರವನ್ನು ಮುಗಿಸಿಕೊಂಡವು. ಆದರೆ ಹಾಗೆ ಸಿಕ್ಕ ಗ್ಯಾಪ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಯಾವ ಸಿನಿಮಾ ಹಿಟ್‌ ಆಯಿತೆಂದು ನೀವು ಕೇಳಿದರೆ ಅದಕ್ಕೆ ಉತ್ತರಿಸೋದು ಕಷ್ಟ. ಏಕೆಂದರೆ ಇದರಲ್ಲಿ ಬಹುತೇಕ ಸಿನಿಮಾಗಳು ಒಂದು ವಾರದ ಮಟ್ಟಿಗೆ ಥಿಯೇಟರ್‌ನಲ್ಲಿದ್ದು, ಸಿಕ್ಕ ಅವಕಾಶಕ್ಕೆ ಖುಷಿಪಟ್ಟುಕೊಂಡು ಜಾಗ ಬಿಟ್ಟುಕೊಟ್ಟವು. ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ರಿಲೀಸ್‌ ಬಿಝಿ ಸ್ವಲ್ಪ ಕಡಿಮೆ ಎನ್ನಬಹುದು. ಈ ಹಿಂದಿನ ಎರಡು ವಾರಗಳಲ್ಲೂ ಅಷ್ಟೇನು ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಎರಡು-ಮೂರು ಬಿಡುಗಡೆಯಾದವೇ ಹೊರತು ಐದಾರು ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್‌ಗೆ ನುಗ್ಗಲಿಲ್ಲ. ಅದಕ್ಕೆ ಕಾರಣ ಥಿಯೇಟರ್‌ ಕೊರತೆಯೂ ಇರಬಹುದು.

ಈ ವಾರ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ವಿಶೇಷವೆಂದರೆ ನಾಲ್ಕಕ್ಕೆ ನಾಲ್ಕು ಚಿತ್ರಗಳು ಕೂಡಾ ಹೊಸಬರ ಚಿತ್ರಗಳು. “ಸೋಡಾಬುಡ್ಡಿ’, “ರೆಡ್‌’, “ರಮಾಬಾಯಿ’ ಹಾಗೂ “ಅಪ್ಸರೆ’ ಚಿತ್ರಗಳು ಈ ವಾರ ಅದೃಷ್ಟ ಪರೀಕ್ಷೆಗಿಳಿದಿವೆ. “ಸೋಡಾಬುಡ್ಡಿ’ಯಲ್ಲಿ ನಾಯಕ-ನಾಯಕಿಯಿಂದ ಹಿಡಿದು ನಿರ್ದೇಶಕರವರೆಗೂ ಸಂಪೂರ್ಣ ಹೊಸಬರು. ಆದರೆ, ಸಿನಿಮಾ ಚೆನ್ನಾಗಿ ಮೂಡಿಬಂದಿದ್ದರಿಂದ ಹಾಗೂ ಗಾಂಧಿನಗರದ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ್ದರಿಂದ ಜನ ಇಷ್ಟಪಡುತ್ತಾರೆಂಬ ನಂಬಿಕೆಯೊಂದಿಗೆ ಚಿತ್ರತಂಡವಿದೆ. ಹಾಗಾಗಿಯೇ ಸಿನಿಮಾ ಬಿಡುಗಡೆಯಾಗುವವರೆಗೆ ಪ್ರಮೋಶನ್‌ ಮಾಡಿದರೆ ಸಾಕು, ಆ ನಂತರ ಸಿನಿಮಾವೇ ಪ್ರಮೋಶನ್‌ ಮಾಡಿಕೊಂಡು ಹೋಗುತ್ತದೆ. ಆ ಸಾಮರ್ಥ್ಯ ಈ ಸಿನಿಮಾಕ್ಕಿದೆ ಎಂದು ಚಿತ್ರದ ನಿರ್ದೇಶಕ ಜ್ಯೋತಿರಾವ್‌ ಮೋಹಿತ್‌ ಚಿತ್ರತಂಡದ ಪ್ರತಿಯೊಬ್ಬರಿಗೂ ಹೇಳಿದ್ದಾರಂತೆ. ಚಿತ್ರದಲ್ಲಿ ಉತ್ಪಲ್‌, ಅನುಷಾ ಹಾಗೂ ಖುಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು, “ರೆಡ್‌’ ಎಂಬ ಸಿನಿಮಾ ಬಗ್ಗೆ ಹೇಳಬೇಕಾದರೆ ಹಾಟ್‌ ಸ್ಟಿಲ್‌ಗ‌ಳನ್ನಷ್ಟೇ ಬಿಟ್ಟು ಚಿತ್ರತಂಡ ಸಿನಿಮಾದ ಬಗ್ಗೆ ಪ್ರಮೋಶನ್‌ ಮಾಡುತ್ತಿದೆ. ಇದು ಕೂಡಾ ಹೊಸಬರ ಸಿನಿಮಾ. ರಾಜೇಶ್‌ ಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾ ಒಂದು ಈ ವಾರ ತೆರೆಗೆ 4 ಚಿತ್ರಗಳು ಮರ್ಡರ್‌ ಮಿಸ್ಟ್ರಿಯಂತೆ. ಗಂಡ ಹೆಂಡತಿ ಸಂಬಂಧದಲ್ಲಿ ಒಬ್ಬರು ತಪ್ಪು ಮಾಡಿದರೂ ಅದರಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆಯಂತೆ. ರಾಜ್‌ಆರ್ಯನ್‌ ಹಾಗೂ ಕಾಮಿನಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

“ಅಪ್ಸರೆ’ ನಾಯಕಿ ಪ್ರಧಾನ ಚಿತ್ರ ಎಂದರೆ ತಪ್ಪಲ್ಲ. ಇದು ಕೂಡಾ ಹೊಸಬರ ಸಿನಿಮಾವೇ. ತನಗಾದ ಅನ್ಯಾಯಕ್ಕೆ ನಾಯಕಿ ಯಾವ ರೀತಿ ಸೇಡು ತೀರಿಸಿಕೊಳ್ಳುತ್ತಾಳೆಂಬ ಕಥಾಹಂದರವಿರುವ ಚಿತ್ರವಿದು. ಮಮತಾ ರಾವತ್‌ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಆರು ಮಂದಿ ನಾಯಕರಾಗಿ ನಟಿಸಿದ್ದಾರೆ. ಸಾರಥಿ ಎನ್ನುವವರು ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಇನ್ನು, ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ “ರಮಾಬಾಯಿ’ ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದೆ. ಇದು ಅಂಬೇಡ್ಕರ್‌ ಮತ್ತು ರಮಾಬಾಯಿ ಅವರ ಸುಖ ಸಂಸಾರ, ಮತ್ತು ಗಂಡನ ಯಶಸ್ಸಿಗೆ ರಮಾಬಾಯಿ ಅವರು ತಮ್ಮ ಬದುಕನ್ನು ತ್ಯಾಗ ಮಾಡಿದನ್ನು ಹೇಳುವ ಕಥೆ. ಆಡಿಟರ್‌ ಶ್ರೀನಿವಾಸ್‌ ಚಿತ್ರದ ನಿರ್ಮಾಪಕರು.

ಎಂ.ರಂಗನಾಥ್‌ ನಿರ್ದೇಶಿಸಿದ್ದಾರೆ. ಸಿದ್ಧರಾಮ ಕಾರ್ಣಿಕ ಅವರು ಅಂಬೇಡ್ಕರ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅಂಬೇಡ್ಕರ್‌ ಮತ್ತು ರಮಾಬಾಯಿ ಅವರ ಸುಖ ಸಂಸಾರ, ಮತ್ತು ಗಂಡನ ಯಶಸ್ಸಿಗೆ ರಮಾಬಾಯಿ ಅವರು ಎಷ್ಟೆಲ್ಲಾ ತಮ್ಮ ಬದುಕನ್ನು ತ್ಯಾಗ ಮಾಡಿದರು ಎಂಬುದನ್ನು ತೋರಿಸಲಾಗುತ್ತಿದೆ. ಇದರಲ್ಲಿ “ಅಪ್ಸರೆ’ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಯಾದರೆ, “ರೆಡ್‌’ಗೆ ಮೇನಕಾ, “ಸೋಡಾಬುಡ್ಡಿ’ಗೆ ತ್ರಿಭುವನ್‌ ಹಾಗೂ “ರಮಾಬಾಯಿ’ಗೆ ಸವಿತ ಚಿತ್ರಮಂದಿರಗಳು ಸಿಕ್ಕಿವೆ.
-ಉದಯವಾಣಿ

Write A Comment