ಮನೋರಂಜನೆ

ತಿರುವಿನಲ್ಲಿ ಶ್ರದ್ಧಾ

Pinterest LinkedIn Tumblr

crec08shraddhaಪವನ್ ಕುಮಾರ್ ನಿರ್ದೇಶನದ ‘ಯು ಟರ್ನ್’ ಚಿತ್ರದ ಮೂಲಕ ಶ್ರದ್ಧಾ ಚಿತ್ರರಂಗ ಪ್ರವೇಶಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಈ ತರುಣಿಗೆ, ‘ಯೂ ಟರ್ನ್’ನಿಂದ ಹೊಸ ತಿರುವು ಕಾಣುವ ಬಯಕೆ.

‘ನನ್ನ ಅಪ್ಪ ಸೇನೆಯಲ್ಲಿದ್ದವರು. ನಾನು ಶಿಸ್ತಿನಿಂದ ಬೆಳೆದವಳು. ಶಿಸ್ತು ಎಂದರೆ ನಿರ್ಬಂಧದ ಶಿಸ್ತಲ್ಲ. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು, ವಿದ್ಯುತ್ ಅಪವ್ಯಯ ಮಾಡಬಾರದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು ಎನ್ನುವ ರೀತಿಯ, ನೋಡಲಿಕ್ಕೆ ಸಣ್ಣದಾಗಿ ಕಾಣುವ ಆದರೆ ಪ್ರಮುಖ ಎನಿಸುವ ವಿಚಾರಗಳ ಶಿಸ್ತು ಅದು. ಈ ಸಿನಿಮಾದಲ್ಲಿ ಕೂಡ ನನ್ನ ಬದುಕಿಗೆ ಹೊಂದುವ ಪಾತ್ರ ದೊರೆತಿದೆ’. ಹೀಗೆ ಹೇಳುವಾಗ ನಟಿ ಶ್ರದ್ಧಾ ಅವರ ಮೊಗದಲ್ಲೊಂದು ನಗೆಮಲ್ಲಿಗೆ ಅರಳಿ ಮರೆಯಾಯಿತು.

ಶ್ರದ್ಧಾ ಕನ್ನಡಕ್ಕೆ ಹೊಸ ಪರಿಚಯ. ಪವನ್ ಕುಮಾರ್‌ ನಿರ್ದೇಶಿಸಿರುವ ‘ಯು ಟರ್ನ್’ ಚಿತ್ರದ ನಾಯಕಿ. ಇದು ಶ್ರದ್ಧಾರ ಮೊದಲ ಸಿನಿಮಾ. ಕಾನೂನು ಪದವಿ ಪಡೆದಿರುವ ಶ್ರದ್ಧಾ, ನ್ಯಾಯಾಲಯದ ಅಂಗಳದಲ್ಲಿ ಕಪ್ಪು ಕೋಟು ತೊಟ್ಟು, ಕಕ್ಷಿದಾರರ ಪರವಾಗಿ ವಾದಕ್ಕೆ ನಿಲ್ಲುವ ಹುಮ್ಮಸ್ಸಿನಲ್ಲಿದ್ದರು. ಆದರೆ ರಂಗಭೂಮಿಯ ಸೆಳೆತ ಕರಿ ಕೋಟನ್ನು ಮರೆಸಿತು. ಈಗ ರಂಗಭೂಮಿಯಿಂದ ಸಿನಿಮಾರಂಗಕ್ಕೆ ಜಿಗಿದಿದ್ದಾರೆ.

ಕಾಲೇಜು ದಿನಗಳಿಂದಲೇ ಇಂಗ್ಲಿಷ್ ರಂಗಭೂಮಿಯಲ್ಲಿ ತೊಡಗಿದ ಶ್ರದ್ಧಾ, ‘ಬಾಕ್ಸರ್ ಶಾಟ್’, ‘ಫನ್ನಿ ಮನ್ನಿ’, ‘ರೂಮರ್ಸ್’ ಇತ್ಯಾದಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರಿಗೆ ‘ಯು ಟರ್ನ್‌’ ಸಿನಿಮಾದಲ್ಲಿ ಅವಕಾಶ ದೊರೆತದ್ದು– ಸ್ನೇಹಿತೆಯ ಸಲಹೆ–ನೆರವಿನ ಮೂಲಕ.

‘ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ. ನನ್ನ ಸ್ನೇಹಿತೆ ಒಬ್ಬಳು ಪವನ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ನಟರನ್ನು ಆಹ್ವಾನಿಸಿದ್ದಾರೆ ಎಂದು ವೆಬ್ ಮತ್ತು ಇಮೇಲ್ ವಿಳಾಸ ಕೊಟ್ಟಳು. ಅವರಿಗೆ ನನ್ನ ಮಾಹಿತಿ ಕಳುಹಿಸಿದೆ. ‘ಕನ್ನಡ ಬರುತ್ತದೆಯಾ’ ಎಂದರು. ಎರಡು ವಾರಗಳ ಕಾಲ ಮೇಲ್‌ನಲ್ಲಿ ಮಾಹಿತಿ ವಿನಿಮಯವಾಯಿತು.

‘ಇದನ್ನು ಓದಿಕೊಂಡು ಬನ್ನಿ’ ಎಂದು ಚಿತ್ರಕಥೆ ಕೊಟ್ಟರು. ಮೂರು ಬಾರಿ ಆಡಿಷನ್ ಎದುರಿಸಿ ಆಯ್ಕೆಯಾದೆ. ನಾನು ಆಯ್ಕೆಯಾಗುವೆ ಎನ್ನುವ ನಂಬಿಕೆ ಇರಲಿಲ್ಲ. ಅವರು ನಾಯಕಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದಾಗ ಆಶ್ಚರ್ಯವಾಯಿತು. ಆದರೆ, ಇಡೀ ಚಿತ್ರದಲ್ಲಿ ಮೂರು ಬಾರಿ ಮಾತ್ರ ಅವರು ನನ್ನ ನಟನೆ ತಿದ್ದಿದ್ದು. ಪವನ್ ಆಯ್ಕೆ ಮಾಡಿದ್ದರಿಂದ ನಾನು ಈ ಪಾತ್ರ ನಿರ್ವಹಿಸಬಲ್ಲೆ ಎನ್ನುವ ವಿಶ್ವಾಸವೂ ಇತ್ತು’ ಎಂದು ‘ಯೂ ಟರ್ನ್‌’ ಸಿನಿಮಾದ ಅನುಭವಗಳನ್ನು ಶ್ರದ್ಧಾ ನೆನಪಿಸಿಕೊಳ್ಳುತ್ತಾರೆ.

ಶ್ರದ್ಧಾ ಬೆಂಗಳೂರಿಗರೇ ಆದರೂ ಅವರ ತಂದೆ ಸೇನೆಯಲ್ಲಿದ್ದ ಕಾರಣ ಬೆಳೆದಿದ್ದು ಅಸ್ಸಾಂ ಸೇರಿದಂತೆ ಉತ್ತರ – ಈಶಾನ್ಯದ ರಾಜ್ಯಗಳಲ್ಲಿ. ಕಾನೂನು ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಬಾಲ್ಯದಿಂದಲೇ ಸಾಂಸ್ಕೃತಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರೂ ಗಂಭೀರವಾಗಿ ರಂಗಭೂಮಿಯಲ್ಲಿ ತೊಡಗಲು ನಿಶ್ಚಯಿಸಿದ್ದು ಕಾನೂನು ವಿದ್ಯಾರ್ಥಿಯಾಗಿದ್ದಾಗ. ಎರಡು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಅವರು ಪ್ರಸ್ತುತ ಕೋಟು ಕಳಚಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿಕೊಂಡಿದ್ದಾರೆ. ನಟನೆಯ ಚುಂಗು ಹಿಡಿದು ಮುಂದೆ ಸಾಗುವ ಆಸೆ ಅವರದು.

‘ಯು ಟರ್ನ್‌’ ಮಹಿಳಾ ಪಾರುಪತ್ಯದ ಸಿನಿಮಾ. ಮುಖ್ಯ ಮೂರು ಪಾತ್ರಗಳನ್ನು ನಿರ್ವಹಿಸುವವರು ಹೆಣ್ಣು ಮಕ್ಕಳೇ. ಶ್ರದ್ಧಾ ಈ ಮೂವರಲ್ಲಿ ಮೊದಲಿಗರು. ಮೊದಲ ಚಿತ್ರವೇ ಮಹಿಳಾ ಪ್ರಧಾನ? ಎನ್ನುವ ಪ್ರಶ್ನೆ ಮುಂದಿಟ್ಟರೆ– ‘ನನಗೆ ನಟನೆಯನ್ನು ಉತ್ತಮ ಪಡಿಸಿಕೊಳ್ಳುವ ಒಳ್ಳೆಯ ಅವಕಾಶ ದೊರೆಯಿತು.
ಡಾನ್ಸ್‌–ಗ್ಲಾಮರ್‌ ರೀತಿಯ ಪಾತ್ರಗಳನ್ನು ಯಾವ ಸಮಯದಲ್ಲಾದರೂ ಮಾಡಬಹುದು.

ಇಂಥ ಪಾತ್ರಗಳು ಸಿಗುವುದು ಕಷ್ಟ. ಒಳ್ಳೆಯ ಪಾತ್ರದ ಮೂಲಕ ನನ್ನ ಸಿನಿಮಾ ಯಾನ ಆರಂಭವಾಗಿರುವುದು ಖುಷಿ ತಂದಿದೆ’ ಎನ್ನುವ ಶ್ರದ್ಧಾ, ತಮ್ಮ ಚೊಚ್ಚಿಲ ಚಿತ್ರದ ಅವಕಾಶವನ್ನು ಅಭಿನಯದ ಪ್ರಾಥಮಿಕ ಪಟ್ಟುಗಳನ್ನು ಕಲಿಸಿಕೊಟ್ಟ ರಂಗಭೂಮಿಗೆ ಅರ್ಪಿಸುತ್ತಾರೆ. ಅಂದಹಾಗೆ, ‘ಯು ಟರ್ನ್‌’ ಚಿತ್ರದಲ್ಲಿ ಅವರು ಪರ್ತಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ‘ಯು ಟರ್ನ್‌’ ತಮ್ಮ ಸಿನಿಮಾ ಹಾದಿಗೊಂದು ತಿರುವು ಕೊಡುತ್ತದೆ ಎನ್ನುವ ಅಚಲ ವಿಶ್ವಾಸ ಅವರದ್ದು.

ಹುಡುಕಾಟದ ಕಥೆ!
‘ಯು ಟರ್ನ್‌’ ಸಂಚಾರಿ ಜಾಗೃತಿಯ ಚಿತ್ರ. ‘ಸಿನಿಮಾದಲ್ಲಿನ ಹಲವು ದೃಶ್ಯಗಳು ನಮ್ಮ ನಿಜ ಜೀವನದಲ್ಲಿ ಇವೆ ಮತ್ತು ನಡೆಯುತ್ತಿವೆ ಎನ್ನಿಸುತ್ತದೆ. ಜನರು ಈ ಚಿತ್ರ ನೋಡಿದರೆ ಇಂಥದ್ದನ್ನು ಮಾಡಬಾರದು ಎಂದುಕೊಳ್ಳುತ್ತಾರೆ.

ನಾನು ಇಲ್ಲಿ ಪತ್ರಕರ್ತೆ. ಒಂದು ವರದಿಯ ಬಗ್ಗೆ ಕೆಲಸ ಮಾಡುತ್ತಿರುವೆ. ಇಲ್ಲಿಂದಲೇ ಸಿನಿಮಾ ಆರಂಭ. ಇದಕ್ಕೆ ಕೊಲೆ ಪ್ರಕರಣಗಳು ತಳಕು ಹಾಕಿಕೊಳ್ಳುತ್ತದೆ. ನನ್ನ ಪಾತ್ರದ ಬಗ್ಗೆ ಹೇಳುವುದಾದರೆ– ಅವಳಿಗೆ ತಪ್ಪುಗಳಾಗುತ್ತಿರುವುದು ಇಷ್ಟವಿರುವುದಿಲ್ಲ. ಸತ್ಯ ಹುಡುಕಬೇಕು ಎನ್ನುವ ನಿಲುವು ಅವಳದ್ದು’ ಎಂದು ಶ್ರದ್ಧಾ ಹೇಳುತ್ತಾರೆ.

Write A Comment