ಕರ್ನಾಟಕ

ರಾಜ್ಯಕ್ಕೆ ಈ ಬಾರಿಯ ಉತ್ತಮ ಮುಂಗಾರು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Pinterest LinkedIn Tumblr

rainಬೆಂಗಳೂರು, ಏ.14- ಕಳೆದ ಎರಡು ವರ್ಷಗಳಿಂದ ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ಈ ಬಾರಿಯ ಮುಂಗಾರು ನೆಮ್ಮದಿ ತರುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುಂಗಾರು ಕುರಿತ ದೀರ್ಘಾವಧಿ ಮುನ್ಸೂಚನೆ ಪ್ರಕಟಿಸಿದೆ. ಅದರ ಪ್ರಕಾರ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮುಂಗಾರು ಮಳೆ ಆಗಲಿದೆ. ಜೂನ್‌ನಿಂದ ಪ್ರಾರಂಭವಾಗುವ ಮುಂಗಾರು ಈ ಬಾರಿ ಉತ್ತಮವಾಗಿರಲಿದೆ. ಈಗಿರುವ ಹವಾಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮಳೆ ಕೊರತೆಯಾಗುವ ಸಾಧ್ಯತೆಗಳು ವಿರಳ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮೇ ಕೊನೆಯ ವಾರದಲ್ಲೇ ಮುಂಗಾರು ಆರಂಭವಾಗುವ ಮುನ್ಸೂಚನೆಗಳು ಕಂಡು ಬಂದಿವೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶ ಮಾಡುವುದು ವಾಡಿಕೆ. ಒಂದು ವಾರ ಮೊದಲೇ ಮುಂಗಾರು ಮಳೆ ರಾಜ್ಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಈಗಿರುವ ಹವಾಮುನ್ಸೂಚನೆ ಪ್ರಕಾರ ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಮುಂಗಾರು ಮಳೆ ಯಾವಾಗ ಹೆಚ್ಚಾಗಲಿದೆ, ಯಾವಾಗ ಕೊರತೆಯಾಗಲಿದೆ ಮತ್ತು ಯಾವಾಗ ಸರಾಸರಿ ಮಳೆಯಾಗಲಿದೆ ಎಂಬುದರ ಬಗ್ಗೆ ನಿಖರವಾದ ಸ್ಪಷ್ಟನೆ ಇಲ್ಲ.

ಮೇ ಅಂತ್ಯದ ವೇಳೆಗೆ ಮತ್ತೊಂದು ಸುತ್ತಿನ ಹವಾಮುನ್ಸೂಚನಾ ವರದಿ ಬಿಡುಗಡೆಯಾಗಲಿದ್ದು, ಆಗ ಮುಂಗಾರು ಮಳೆಯ ಬಗ್ಗೆ ಸೂಕ್ತ ಮುನ್ಸೂಚನೆ ದೊರೆಯಲಿದೆ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರ ಪ್ರಕಾರ, ರಾಜ್ಯದಲ್ಲಿ ಮಳೆ ಕೊರತೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ. ಆದರೂ ಮೇ ಅಂತ್ಯದ ವೇಳೆಗೆ ರಾಜ್ಯದ ಮಳೆಯ ಪರಿಸ್ಥಿತಿ ಕುರಿತ ಮುನ್ಸೂಚನಾ ವರದಿ ದೊರೆಯಲಿದೆ.

ಮುಂಗಾರು ಪೂರ್ವ ಮಳೆಯು ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ. ಕಳೆದ ಎರಡು ವರ್ಷಗಳಿಮದ ಬರದಿಂದಾಗಿ ವಾತಾವರಣದಲ್ಲಿ ತೇವಾಂಶದ ಕೊರತೆ ಹೆಚ್ಚಾಗಿದೆ. ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಒಣ ಹವೆ ಮುಂದುವರೆಯುತ್ತಿದೆ. ರಾಜ್ಯದ ಅರ್ಧ ಭಾಗದಷ್ಟು 420 ಸೆಲ್ಸಿಯೆಸ್‌ಗಿಂತಲೂ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳುವುದು ವಾಡಿಕೆ. ಆದರೆ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಇದುವರೆಗೆ ಬಿದ್ದಿರುವ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಇದೆ ಎಂದು ಅವರು ಹೇಳಿದರು.

Write A Comment