ಕರ್ನಾಟಕ

ದನಗಳಿಗೆ ದೊರೆಯದ ಬೆಲೆ; ಸಂಕಷ್ಟದಲ್ಲಿ ರೈತರು

Pinterest LinkedIn Tumblr

13BDR3-Auradಬೀದರ್: ಸತತ ಮೂರು ವರ್ಷಗಳ ಬರಗಾಲ ರೈತರನ್ನು ಚಿಂತೆಗೀಡು ಮಾಡಿದೆ. ಹಸಿಮೇವು ಹಾಗೂ ನೀರು ದೊರೆಯದ ಕಾರಣ ರೈತರು ದನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತರುತ್ತಿದ್ದಾರೆ. ಬರದಿಂದಾಗಿ ಕೊಳ್ಳುವರರ ಸಂಖ್ಯೆ ಕಡಿಮೆಯಾಗಿದ್ದು, ದನಗಳಿಗೆ ನಿರೀಕ್ಷಿತ ಬೆಲೆಯೂ ಸಿಗದೆ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರು ಎತ್ತು, ಹೋರಿ, ಹಸು ಹಾಗೂ ಎಮ್ಮೆಗಳನ್ನು ಹಿಡಿದುಕೊಂಡು ಉತ್ತಮ ಬೆಲೆಗಾಗಿ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳಿಗೆ ಅಲೆದಾಡುತ್ತಿದ್ದಾರೆ. ಬೀದರ್‌, ಔರಾದ್, ಭಾಲ್ಕಿ ತಾಲ್ಲೂಕಿನ ಖಾನಾಪುರ ಹಾಗೂ ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ ದನಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ರೈತರು ದನಗಳನ್ನು ಅನಿವಾರ್ಯವಾಗಿ ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ.

ಕೆಲವು ರೈತರು ತಮ್ಮ ಮಕ್ಕಳ ಮದುವೆ, ಮುಂಜಿ ಇನ್ನಿತರ ಕಾರ್ಯಗಳಿಗೆ ಹಣ ಇಲ್ಲದ ಕಾರಣ ಜಾನುವಾರು ಮಾರಾಟ ಮಾಡುತ್ತಿದ್ದಾರೆ. ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ದೇವಣಿ ಎತ್ತುಗಳು ₹ 75 ಸಾವಿರಕ್ಕೂ ಮಾರಾಟವಾಗುತ್ತಿಲ್ಲ. ರೈತರು ಒಣಮೇವು ತೊಯ್ಯಿಸಿ ಉಪ್ಪು ಬೆರೆಸಿದ ನೀರು ಸಿಂಪಡಿಸಿ, ಜಾನುವಾರುಗಳಿಗೆ ತಿನ್ನಲು ಕೊಡುತ್ತಿದ್ದಾರೆ. ಪದೇ ಪದೇ ಒಣ ಮೇವು ತಿನ್ನಲು ದನಗಳು ಹಿಂಜರಿಯುತ್ತಿವೆ.

‘ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ಒಣ ಮೇವು ಸಾಕಷ್ಟು ಲಭ್ಯ ಇದೆ ಎಂದು ಅಧಿಕಾರಿಗಳು ಹೇಳಿಕೆ ಕೊಡುತ್ತಲೇ ಇದ್ದಾರೆ. ದನಗಳು ಕೇವಲ ಕಣಿಕೆಯನ್ನೇ ವರ್ಷಗಟ್ಟಲೇ ತಿನ್ನಲು ಸಾಧ್ಯವೆ? ದನಗಳ ದಯನೀಯ ಸ್ಥಿತಿಯನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರಾಟ ಮಾಡಲು ತಂದಿದ್ದೇನೆ’ ಎಂದರು ಭಾಲ್ಕಿ ತಾಲ್ಲೂಕಿನ ಖಾನಾಪುರ ದನಗಳ ಸಂತೆಯಲ್ಲಿ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದ ನೀಲಮ್ಮನಹಳ್ಳಿಯ ಶಂಕರ.

ಎರಡು ವರ್ಷದಿಂದ ಹೊಲದಲ್ಲಿ ಏನೂ ಬೆಳೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಎತ್ತುಗಳಿಗೆ ನಿತ್ಯ ಮೇವು ಖರೀದಿಸಿ ಹಾಕುವುದು ನಮ್ಮಿಂದ ಆಗುತ್ತಿಲ್ಲ. ಮಗಳ ಮದುವೆ ಮಾಡಬೇಕಿದೆ. ಹಣ ಇಲ್ಲ. ಹೀಗಾಗಿ ದೇವಣಿ ಜೋಡಿ ಎತ್ತುಗಳನ್ನು ಮಾರಾಟ ಮಾಡಲು ತಂದಿದ್ದೇನೆ ಎಂದರು.

ದೇವಣಿ ತಳಿಯ ಹೋರಿ ಒಂದು ಲಕ್ಷದ ವರೆಗೆ ಇವೆ. ₹ 75 ಸಾವಿರ ಬಂದರೂ ಮಾರಾಟ ಮಾಡಲು ಸಿದ್ಧನಿದ್ದೇನೆ. ನನ್ನಂತೆ ಇತರ ರೈತರು ಸಂಕಷ್ಟದಲ್ಲಿದ್ದು, ದನಗಳನ್ನು ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ನೀರಿನ ಸೌಲಭ್ಯ ಇರುವ ರೈತರು ಕೊಂಡುಕೊಳ್ಳುವ ನಿರೀಕ್ಷೆ ಇದೆ ಎಂದರು ಅವರು.

ಎಮ್ಮೆ, ಹಸುಗಳು ಹಸಿರು ಹುಲ್ಲು ಇಲ್ಲದಿದ್ದರೆ ಹೆಚ್ಚು ಹಾಲು ಕೊಡುವುದಿಲ್ಲ. ಒಣಮೇವು ತಿಂದು ಬಡಕಲು ಆಗುತ್ತಿವೆ. ಮೇವಿಲ್ಲದ ಕಾರಣ ಎಮ್ಮೆ ಮಾರುತ್ತಿದ್ದೇನೆ ಎಂದು ಭಾಲ್ಕಿ ತಾಲ್ಲೂಕಿನ ಕಣಜಿಯ ನಾಮದೇವ ಲಮಾಣಿ ಹೇಳಿದರು.

ಖಾನಾಪುರದ ದನಗಳ ಸಂತೆಗೆ ರೈತರು ಸಾಕಷ್ಟು ಸಂಖ್ಯೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡಲು ತರುತ್ತಿದ್ದಾರೆ. ಬರ ಇರುವ ಕಾರಣ ಹೆಚ್ಚು ವ್ಯವಹಾರ ನಡೆಯುತ್ತಿಲ್ಲ. ಮಾರಾಟಕ್ಕೆ ಬಂದಿದ್ದ 900 ದನಗಳಲ್ಲಿ ಕೇವಲ 110 ದನಗಳು ಮಾರಾಟವಾಗಿವೆ ಎಂದು ಭಾಲ್ಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೋಂದಣಿ ಅಧಿಕಾರಿ ಸಂತೋಷ ತಿಳಿಸಿದರು.

ನೆತ್ತಿ ಸುಡುವ ಬಿಸಿಲು ಇದೆ. ಜಾನುವಾರುಗಳಿಗೂ ಬೇಸಿಗೆಯಲ್ಲಿ ಪದೇ ಪದೇ ನೀರು ಬೇಕು. ಮನುಷ್ಯರೇ ನೀರಿಗಾಗಿ ಪರದಾಡುತ್ತಿದ್ದಾರೆ. ಇನ್ನು ಜಾನುವಾರುಗಳಿಗೆ ಎಲ್ಲಿಂದ ನೀರು ಹೊತ್ತು ತರಬೇಕು. ಅವುಗಳನ್ನು ಪಾಲನೆ ಮಾಡಲು ಸಾಧ್ಯವಾಗದೆ ಮಾರಾಟ ಮಾಡಬೇಕಾಯಿತು ಎಂದು ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿಯ ದನಗಳ ಸಂತೆಯಲ್ಲಿ ರೈತರಾದ ವೀರಪಣ್ಣ ಹಳ್ಳಿದೊಡ್ಡಿ ಹೇಳಿದರು.

ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ ಮಂಗಳವಾರ ಒಟ್ಟು 700 ದನಗಳು ಮಾರಾಟಕ್ಕೆ ಬಂದಿದ್ದವು. ಆದರೆ ಅದರಲ್ಲಿ 12 ಜೊತೆ ಎತ್ತುಗಳು, 10 ಎಮ್ಮೆ ಹಾಗೂ 2 ಕರುಗಳು ಮಾತ್ರ ಮಾರಾಟವಾಗಿವೆ.

‘ನಮ್ಮ ಮನೆಯಲ್ಲಿ ಒಟ್ಟು ಏಳು ದನಗಳು ಇದ್ದವು. ಗುಜರಾತಿ ತಳಿಯ ಒಂದು ಲಕ್ಷ ಬೆಲೆಯ ಎಮ್ಮೆಯನ್ನು ಕೇವಲ ₹ 20 ಸಾವಿರಕ್ಕೆ ಮಾರಾಟ ಮಾಡಿದೆ. ಒಂದು ಹಸು ಹಾಗೂ ಎರಡು ಕರುಗಳನ್ನೂ ಮಾರಾಟ ಮಾಡಿದ್ದೇನೆ. ಸರ್ಕಾರ ಮೇವು ಒದಗಿಸಿದ್ದರೆ ಮನೆಯಲ್ಲಿ ಉಳಿಸಿಕೊಳ್ಳಬಹುದಿತ್ತು. ಉನ್ನತ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಿರ್ಧಾರ ಕೈಗೊಳ್ಳುತ್ತಾರೆ. ಕ್ಷೇತ್ರಕ್ಕೆ ಭೇಟಿ ಕೊಡುವುದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ ಎಂದು ಬೀದರ್‌ನ ಮಂಗಲಪೇಟೆ ಜಾನುವಾರು ಮಾರುಕಟ್ಟೆಯಲ್ಲಿ ಹಸುಗಳನ್ನು ಮಾರಾಟ ಮಾಡಿದ ನಂತರ ಬೆನಕನಹಳ್ಳಿ ಗ್ರಾಮದ ರಾಮರಾವ್ ಚವ್ಹಾಣ ಅಸಮಾಧಾನ ವ್ಯಕ್ತಪಡಿಸಿದರು.

‘ನನಗೆ 3 ಎಕರೆ ಜಮೀನು ಇದೆ. ಮೂರು ವರ್ಷದಿಂದ ಏನೂ ಬೆಳೆದಿಲ್ಲ. ಜಾನುವಾರುಗಳಿಗೆ ಆಹಾರವಾಗಿ ಏನು ಕೊಡಬೇಕು ತಿಳಿಯುತ್ತಿಲ್ಲ. ಹೀಗಾಗಿ ₹65 ಸಾವಿರ ಮೌಲ್ಯದ ಎತ್ತುಗಳನ್ನು ಕೇವಲ ₹ 45 ಸಾವಿರಕ್ಕೆ ಮಾರಾಟ ಮಾಡಬೇಕಾಯಿತು ಎಂದರು ಬಸಂತಪುರದ ರಾಮಣ್ಣ ಮಾಡಗಿ.

‘ನಮ್ಮ ಮನೆಯಲ್ಲಿ ಒಟ್ಟು ಏಳು ಹಸುಗಳಿದ್ದವು. ನಿತ್ಯ ಹಸಿಮೇವು ಖರೀದಿಸಿ ತಂದು ಅವುಗಳಿಗೆ ಹಾಕಲು ಸಾಧ್ಯವಾಗದೇ ಮೂರು ಹಸುಗಳನ್ನು ಮಾರಾಟ ಮಾಡಿದ್ದೇನೆ. ₹ 50 ಸಾವಿರ ಮೌಲ್ಯದ ಜರ್ಸಿ ಆಕಳನ್ನು ₹ 30 ಸಾವಿರಕ್ಕೆ ಕೊಟ್ಟಿದ್ದೇನೆ. ಈಗ ಹೈನುಗಾರಿಕೆ ನಿಂತು ಹೋಗಿದೆ’ ಎಂದು ಸುರೇಂದ್ರ ಕಾರಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಅತಿದೊಡ್ಡ ಜಾನುವಾರು ಸಂತೆ ಔರಾದ್‌ನಲ್ಲಿ ಪ್ರತಿ ಸೋಮವಾರ ಜರುಗುತ್ತದೆ. ಈ ಬಾರಿ 4,500 ದನಗಳು ಸಂತೆಗೆ ಬಂದಿದ್ದವು. ಸೋಮವಾರದ ಸಂತೆಯಲ್ಲಿ ಕೇವಲ 200 ದನಗಳು ಮಾರಾಟ ಆಗಿವೆ. ಬಹುತೇಕ ದನಗಳನ್ನು ಕೊಳ್ಳುವವರೇ ಇರಲಿಲ್ಲ. ಹೀಗಾಗಿ ರೈತರಿಗೆ ನಿರಾಸೆ ಕಾದಿತ್ತು.

ಪ್ರತಿವಾರ 50ರಿಂದ 100 ದನಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದೆ. ನೀರು, ಮೇವಿನ ಕೊರತೆಯಿಂದಾಗಿ ವ್ಯವಹಾರ ನಡೆಸಿಲ್ಲ ಎಂದು ತಿಳಿಸಿದರು ಔರಾದ್‌ನ ದನಗಳ ವ್ಯಾಪಾರಿ ಗೋವಿಂದ ಜಾಧವ.

ಪ್ರತಿವಾರ 100ರಿಂದ 150 ದನಗಳನ್ನು ಖರೀದಿಸಿ ಮಾರಾಟ ಮಾಡುತ್ತೇನೆ. ಏಪ್ರಿಲ್‌ 11ರಂದು ₹ 20 ಸಾವಿರಕ್ಕೆ ಒಂದರಂತೆ ಐದು ಹಸುಗಳನ್ನು ಖರೀದಿಸಿದ್ದೆ. ಕಳೆದ ಸೋಮವಾರದ ಸಂತೆಯಲ್ಲಿ ರೈತರು ₹ 15 ಸಾವಿರಕ್ಕೂ ಕೇಳುತ್ತಿಲ್ಲ. ಹೀಗಾಗಿ ಈ ಬಾರಿ ದನಗಳನ್ನು ಖರೀದಿಸುವ ಧೈರ್ಯ ಮಾಡಿಲ್ಲ ಎಂದರು ಔರಾದ ತಾಲ್ಲೂಕಿನ ಸಾವರಗಾಂವದ ದನಗಳ ವ್ಯಾಪಾರಿ ಮಾರುತಿ ಸಾವರಗಾಂವೆ ಬೀದರ್‌ನ ಮಂಗಲಪೇಟೆ ಹಾಗೂ ಔರಾದ್‌ನ ದನಗಳ ಸಂತೆಯಲ್ಲಿ ಬರಡು, ವಯಸ್ಸಾದ, ಮೇವಿನ ಕೊರತೆಯಿಂದ ನಿತ್ರಾಣಗೊಂಡ ದನಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಕಟುಕರು ಬಡಕಲು ದನಗಳನ್ನು ಖರೀದಿಸಿ ಅವುಗಳ ದೇಹದ ಮೇಲೆ ಮಾರ್ಕ್‌ ಮಾಡಿ ಲಾರಿಗಳಲ್ಲಿ ತೆಲಂಗಾಣದ ಕಸಾಯಿಖಾನೆಗೆ ಸಾಗಿಸಿದರು.

ವಯಸ್ಸಾದ ಹಾಗೂ ಬಡಕಲು ದನಗಳನ್ನು ಜಹೀರಾಬಾದ್‌ ಕಸಾಯಿಖಾನೆ ಮತ್ತು ಗಟ್ಟಿಮುಟ್ಟಾದ ದನಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತಿದೆ. ದೆಹಲಿಯಿಂದಲೂ ಬೇಡಿಕೆ ಬರುತ್ತಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

Write A Comment