ಕರ್ನಾಟಕ

ಇರುವ ವರದಿಗಳನ್ನು ನಿರ್ಲಕ್ಷಿಸಿ ಮತ್ತಷ್ಟು ವರದಿಗಳು ಮತ್ತು ಸಮಿತಿಗಳನ್ನು ರಚಿಸುವುದು ಅರ್ಥಹೀನ : ಮುಖ್ಯಮಂತ್ರಿ ಚಂದ್ರು

Pinterest LinkedIn Tumblr

muಬೆಂಗಳೂರು, ಏ.14- ಕನ್ನಡ ನಾಡು, ನುಡಿ, ಗಡಿಗೆ ಸಂಬಂಧಪಟ್ಟಂತೆ ಸುಮಾರು 40ಕ್ಕೂ ಹೆಚ್ಚು ಪ್ರಮುಖ ವರದಿಗಳಿವೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸದೆ ಮತ್ತಷ್ಟು ವರದಿಗಳನ್ನು ಪಡೆಯುವುದು ಮತ್ತು ಸಮಿತಿಗಳನ್ನು ರಚಿಸುತ್ತಿರುವುದು ಅರ್ಥಹೀನ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಕನ್ನಡ, ಕನ್ನಡಿಗ, ಕರ್ನಾಟಕ ವರದಿಯ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು, ನುಡಿ, ಗಡಿ ವಿಚಾರವಾಗಿ ಈವರೆಗೂ 40ಕ್ಕೂ ಹೆಚ್ಚು ವರದಿಗಳು ಸಲ್ಲಿಕೆಯಾಗಿವೆ. ಅವು ಸರ್ಕಾರದಲ್ಲಿ ಕೊಳೆಯುತ್ತಿವೆ.

ಅವುಗಳ ಶಿಫಾರಸುಗಳನ್ನು ಜಾರಿಗೆ ತಂದರೆ ಕನ್ನಡ ಮತ್ತು ಕನ್ನಡಿಗರು ತಮ್ಮಷ್ಟಕ್ಕೆ ತಾವೇ ಅಭಿವೃದ್ಧಿಯಾಗುತ್ತಾರೆ. ಆದರೆ, ಅವುಗಳು ಜಾರಿಗೆ ಬರುತ್ತಿಲ್ಲ. ಬದಲಾಗಿ ಕಣ್ಣೊರೆಸುವ ತಂತ್ರಗಾರಿಕೆಯ ಭಾಗವಾಗಿ ಮತ್ತಷ್ಟು ವರದಿಗಳಿಗೆ ಸರ್ಕಾರ ಸಮಿತಿಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು. ಹಲವಾರು ವರದಿಗಳು ಬಹಳ ಹಳೆಯದಾಗಿದ್ದು, ಪ್ರಸ್ತುತ ಕಾಲಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಅವುಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಣ, ಉದ್ಯೋಗ, ಜಲ ವಿಷಯಕ್ಕೆ ಸಂಬಂಧಪಟ್ಟಂತೆ ರಾಷ್ಟ್ರಮಟ್ಟದ ನೀತಿಗಳನ್ನು ರೂಪಿಸಿದರೆ ದೇಶದ ಬಹುಪಾಲು ಸಮಸ್ಯೆಗಳು ಬಗೆಹರಿಯುತ್ತವೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ತರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ರಾಜಕೀಯ ಪ್ರಬುದ್ಧಮಾನಕ್ಕೆ ಬಂದವರು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಅವರು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಚಂದ್ರು ವಿಷಾದಿಸಿದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕೆಂದು ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ. ಆದರೆ, ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ನ್ಯಾಯಾಲಯ ಕನ್ನಡ ಮಾತೃಭಾಷೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿದೆ. ಇಲ್ಲಿ ನ್ಯಾಯಾಲಯಗಳು ಸಂವಿಧಾನಕ್ಕಿಂತ ಮೇಲ್ಪಟ್ಟವೇ ಎಂಬುದನ್ನು ಯೋಚಿಸಬೇಕಾಗಿದೆ ಎಂದರು. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ. ಇಂದು ಬಿಡುಗಡೆ ಮಾಡಿರುವ ಸಂಪುಟದಲ್ಲಿ ಸುಮಾರು 200 ವರ್ಷಗಳ ಕನ್ನಡ ರೂಪಾಂತರದ ವಿವರಣೆ ಇದೆ. ಎಷ್ಟೋ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಆದರೆ, ಅವು ಜಾರಿಗೆ ಬಂದಿಲ್ಲ. ಬಹಳಷ್ಟು ವರದಿಗಳು ಮುಚ್ಚಿ ಹೋಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಮಾತನಾಡಿ, ಕನ್ನಡ ಭಾಷಾ ಮಾಧ್ಯಮಗಳ ಬಗ್ಗೆ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪಿನ ಕುರಿತು ಪ್ರಾಧಿಕಾರ ಪ್ರತ್ಯೇಕ ಸಂಪುಟ ಹೊರತರುವ ಚಿಂತನೆ ನಡೆಸಿದೆ. ಕನ್ನಡ ಅಭಿವೃದ್ಧಿಗೆ ಇಂದು ಬಿಡುಗಡೆಯಾಗಿರುವ ಸಂಪುಟ ಆಕಾರ ಗ್ರಂಥ ಎಂದು ಹೇಳಿದರು. ನ್ಯಾಯಾಲಯಗಳು ಇತ್ತೀಚೆಗೆ ನೀಡುತ್ತಿರುವ ತೀರ್ಪಿನ ಬಗ್ಗೆ ವಿಮರ್ಶೆ ಅಗತ್ಯವಿದೆ ಎಂದು ಅವರು ನುಡಿದರು. ಡಾ.ಜಿ.ಬಿ.ಹರೀಶ್ ಮಾತನಾಡಿ, ಕನ್ನಡ ಹೋರಾಟಗಾರರಿಗೆ ನಾಡು, ನುಡಿಯ ಇತಿಹಾಸ ತಿಳಿದುಕೊಳ್ಳಲು ಇಂದು ಬಿಡುಗಡೆಯಾದ ಸಂಪುಟ ಬಹಳ ಉಪಯೋಗಕಾರಿಯಾಗಿದೆ ಎಂದರು. ಸಂಪುಟದ ಸಂಚಾಲಕ ರಾ.ನಂ.ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಮುರಳೀಧರ್, ವಾಣಿಜ್ಯ ಮತ್ತು ಕೈಗಾರಿಕಾ ಕನ್ನಡ ಸಂಘಟನೆಯ ಅಧ್ಯಕ್ಷ ಎಂ.ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

Write A Comment