ಕರ್ನಾಟಕ

ಮುಖ್ಯಮಂತ್ರಿ ಹುದ್ದೆ ಬದಲಾವಣೆ ಅನಿವಾರ್ಯ, ದಲಿತರಿಗೆ ಅವಕಾಶ ಕೊಡಿ : ಎಂ.ವಿ.ರಾಜಶೇಖರನ್

Pinterest LinkedIn Tumblr

rajಬೆಂಗಳೂರು, ಏ.14-ದಲಿತ ಮುಖ್ಯಮಂತ್ರಿ ಹುದ್ದೆ ಪ್ರಸ್ತಾಪ ಮತ್ತೆ ರೆಕ್ಕೆ ಪುಕ್ಕದೊಂದಿಗೆ ಗರಿಗೆದರಿದ್ದು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯನ್ನು ಪೂರ್ಣಗೊಳಿಸಿದರೆ ಸಂತೋಷ. ಒಂದು ವೇಳೆ ಬದಲಾವಣೆಯ ಅನಿವಾರ್ಯತೆ ಎದುರಾದರೆ ದಲಿತರಿಗೆ ಅವಕಾಶ ಕೊಡಬೇಕು ಎಂದು ಹಿರಿಯ ಕಾಂಗ್ರೆಸ್ಸಿಗ ಎಂ.ವಿ.ರಾಜಶೇಖರನ್ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವವುಳ್ಳ ರಾಷ್ಟ್ರಗಳಿಗೆ ಮಾದರಿಯಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನಮಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ದಲಿತರು ಮುಖ್ಯಮಂತ್ರಿಯಾಗಬೇಕು. ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.ರಾಜಕೀಯ ಎನ್ನುವುದು ಪೂರ್ಣವಿರಾಮವಲ್ಲ, ಅದು ಅಲ್ಪವಿರಾಮವಿದ್ದಂತೆ ಎಂದು ವಿಶ್ಲೇಷಿಸಿದ ಅವರು, ರಾಜ್ಯದಲ್ಲಿ ಉಳಿದ ಅವಧಿಯನ್ನು ಸಿದ್ದರಾಮಯ್ಯ ಅವರು ಪೂರ್ಣಗೊಳಿಸುವುದು ಸಂತೋಷದ ವಿಷಯ. ಒಂದು ವೇಳೆ ಬದಲಾವಣೆಯ ಅನಿವಾರ್ಯತೆ ಎದುರಾದರೆ ದಲಿತರಿಗೆ ಅವಕಾಶ ಕೊಡಲಿ. ಈ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರು ಬದ್ಧತೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ದಲಿತರಿಗೆ ಉನ್ನತ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ದುರಂತ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರು, ಕೇವಲ ದಲಿತರು, ಹಿಂದುಳಿದವರಷ್ಟೇ ಅಲ್ಲ, ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡಿದ್ದರು. ಎಲ್ಲರೂ ಮುಂದುವರಿಯಬೇಕು, ದೇಶ ಅಭಿವೃದ್ಧಿ ಸಾಧಿಸಬೇಕು ಎಂದು ಆಶಿಸಿದ್ದರು. ಅದಕ್ಕಾಗಿಯೇ ಸಮಾನತೆ ಎಂಬುದನ್ನು ಸಂವಿಧಾನದಲ್ಲಿ ಅಳವಡಿಸಿದರು ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನ, ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಎರಡನ್ನೂ ಮುಂದಿಟ್ಟುಕೊಂಡು ಸಾಗಿದರೆ ಅಭಿವೃದ್ಧಿ ಸಾಧ್ಯ ಎಂದ ಅವರು, ಬಸವಣ್ಣನವರು 12ನೆ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದ್ದರು. ಆಧುನಿಕ ಭಾರತದ ಸಂವಿಧಾನ ರಚಿಸುವಲ್ಲಿ ಬಸವಣ್ಣನವರ ಆಶಯಗಳು ಪ್ರೇರಣೆಯಾದವು ಎಂದು ಹೇಳಿದರು. ಅಂಬೇಡ್ಕರ್ ಹಾಗೂ ಗಾಂಧೀಜಿ ನಡುವೆ ಸಂಘರ್ಷ ಇತ್ತೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರಿಬ್ಬರಲ್ಲಿ ವಾದ ಮತ್ತು ತರ್ಕಗಳಿದ್ದವು, ಎಂದಿಗೂ ಸಂಘರ್ಷವಿರಲಿಲ್ಲ ಎಂದು ಮುನಿಯಪ್ಪ ತಿಳಿಸಿದರು.

ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಂಬೇಡ್ಕರ್ ಮನುಸ್ಮೃತಿ ಕೊಟ್ಟ ಮೊದಲ ವ್ಯಕ್ತಿ ಎಂದು ಬಣ್ಣಿಸಿದರು. ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಲ್ಲಿ ಅಸಮಾಧಾನವಿದೆ. ಅವರು ಮನುಸ್ಮೃತಿ ಕೊಟ್ಟ ವ್ಯಕ್ತಿ ಎಂಬ ಕಾರಣಕ್ಕೆ ಈ ಸಿಟ್ಟಿದೆ. ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ಡಿ.6ರ ದಿನವನ್ನು ಬಾಬ್ರಿ ಮಸೀದಿ ಧ್ವಂಸಗೊಂಡ ದಿನವನ್ನಾಗಿ ಮಾಡಿ ಸಂಘ ಪರಿವಾರದವರು ಆಚರಿಸುತ್ತಾರೆ ಎಂದು ಅವರು ಹೇಳಿದರು.

ಇದನ್ನು ಜನಸಾಮಾನ್ಯರು, ಕಾರ್ಯಕರ್ತರು ಅರಿಯಬೇಕು. ಕೇವಲ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಬಿ.ಕೆ.ಚಂದ್ರಶೇಖರ್, ವೀರಣ್ಣ ಮತ್ತಿಕಟ್ಟಿ, ಬೋಸ್‌ರಾಜ್ ಮತ್ತು ಆರ್.ವಿ.ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Write A Comment