ಕರ್ನಾಟಕ

ಕ್ರಿಮಿನಾಶಕ ಮಾತ್ರೆ ಸೇವಿಸಿ ತಾಯಿ ಸಾವು : ಮಕ್ಕಳ ಸ್ಥಿತಿ ಗಂಭೀರ

Pinterest LinkedIn Tumblr

sಮಳವಳ್ಳಿ, ಏ.14- ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ವಿಷದ ಮಾತ್ರೆ ಸೇವಿಸಿದ ಪರಿಣಾಮವಾಗಿ ತಾಯಿ ಸಾವನ್ನಪ್ಪಿದ್ದು ಮಕ್ಕಳಿಬ್ಬರು ತೀವ್ರ ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ಜರುಗಿದೆ. ಈ ಗ್ರಾಮದ ರಮೇಶ್ ಎಂಬುವರ ಪತ್ನಿ ಜಯಲಕ್ಷ್ಮಿ (25) ಮೃತಪಟ್ಟಿದ್ದಾರೆ. 5 ವರ್ಷದ ಕೆಂಪಮ್ಮ ಹಾಗೂ ಮೂರು ವರ್ಷದ ಅಕ್ಷಿತಾರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದು ಆಕಸ್ಮಿಕ ಘಟನೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ನಿನ್ನೆ ಬೆಳಗ್ಗೆ ತಮ್ಮ ಮನೆಯಲ್ಲಿದ್ದ ಬಿತ್ತನೆ ಕಾಳುಗಳು ಕೆಡದಂತೆ ಸಂರಕ್ಷಿಸುವ ಸಲುವಾಗಿ ಬಳಸುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ ತಾಯಿ ಮಕ್ಕಳು ಸೇವಿಸಿ ಅಸ್ವಸ್ಥಗೊಂಡು ಮನೆಯೊಳಗೆ ಒದ್ದಾಡುತ್ತಿದ್ದರು ಎನ್ನಲಾಗಿದೆ. ಈ ದೃಶ್ಯವನ್ನು ಕಂಡು ನೆರೆಹೊರೆಯವರು ಕೂಡಲೇ ಈ ಮೂವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಾಯಿ ಜಯಲಕ್ಷ್ಮಿ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಮೃತಳ ತಂದೆ ಮರಿಗೌಡ ಅವರು ತಮ್ಮ ಮಗಳಿಗೆ ಕಳೆದ 2 ವರ್ಷಗಳಿಂದಲೂ ತಲೆ ನೋವು ಬರುತ್ತಿತ್ತು. ಇದನ್ನು ಸಹಿಸಲಾಗದೆ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ್ದು ಇದೇ ಮಾತ್ರೆಯನ್ನು iಕ್ಕಳು ಸಹ ತಿಂದು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ್ದ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment