ಮನೋರಂಜನೆ

ಅಂಬೇಡ್ಕರ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ಕುರಿತ ಚಿತ್ರ ‘ರಮಾಬಾಯಿ’ ತೆರೆಗೆ

Pinterest LinkedIn Tumblr

aಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 124ನೆ ಜನ್ಮ ದಿನೋತ್ಸವದಂದೇ ಅವರ ಪತ್ನಿ ರಮಾಬಾಯಿ ಅವರ ಜೀವನ ಕುರಿತಾದ ಚಿತ್ರ ಈ ವಾರ ಬಿಡುಗಡೆಯಾಗಿದೆ. ರಮಾಬಾಯಿರ ವರ ಹೆಸರನ್ನೇ ಬಳಸಿಕೊಂಡು ಚಿತ್ರ ನಿರ್ಮಿಸಿದ್ದಾರೆ ಆಡಿಟರ್ ಶ್ರೀನಿವಾಸ್. ಈ ಚಿತ್ರಕ್ಕೆ ರಂಗನಾಥ್ ಆಕ್ಷನ್ ಕಟ್ ಹೇಳಿದ್ದು ನಟಿ ಯಜ ಶೆಟ್ಟಿ ರಮಾಬಾಯಿಯ ಪಾತ್ರ ನಿರ್ವಹಿಸಿದ್ದಾರೆ. ಅಂಬೇಡ್ಕರ್ ಆಗಿ ಸಿದ್ದರಾಮ ಕಾರನಿಕ ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ಆಡಿಟರ್ ಶ್ರೀನಿವಾಸ್ ಚಿತ್ರದ ಬಗ್ಗೆ ಮಾತನಾಡಿ ಅಂಬೇಡ್ಕರ್ ಅವರ ಹೆಸರು ಎಲ್ಲರಿಗೂ ಗೊತ್ತು, ಆದರೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾದ ಅವರ ಪತ್ನಿಯ ಪರಿಶ್ರಮದ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ, ಅದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು. ನಟಿ ಯಜ ಶೆಟ್ಟಿ ಮಾತನಾಡಿ ರಮಾಬಾಯಿ ಯಾರೂ ಅಂತ ಮೊದಲು ನನಗೆ ಗೊತ್ತಿರಲಿಲ್ಲ, ಅವರ ಜೀವನ ವೃತ್ತಾಂತ ಕೇಳಿದ ಮೇಲೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.

ನಿರ್ದೇಶಕ ರಂಗನಾಥ್ ಮಾತನಾಡಿ ಮೊದಲು ಚಿತ್ರ ಮಾಡುವಾಗ ಭಯವಿತ್ತು, ಜನ ಹೇಗೆ ಸ್ವೀಕರಿಸುತ್ತಾರೋ, ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಬರುತ್ತದೆಯೋ ಎನ್ನುವ ಅಳುಕು ಹೀಗಲೂ ಇದೆ. ಅಂಬೇಡ್ಕರ್ ಅವರಿಗೆ ಮೊದಲ ಅಭಿಮಾನಿ ಅವರ ಹೆಂಡತಿ ರಮಾಬಾಯಿ. ಆಕೆ ಪಟ್ಟ ಕಷ್ಟ ನಷ್ಟಗಳನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎಂಬ ಮಾತು ಎಲ್ಲರಿಗೂ ತಿಳಿದಿರುವ ವಿಚಾರವೇ. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸದಾ ಸ್ಫೂರ್ತಿದಾಯಕವಾಗಿ ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತ ಸದಾ ಬೆನ್ನುಲುಬಾಗಿ ಇದ್ದಂತಹ ಈ ಮಹಾನ್ ಸಾಧ್ವಿಮಣಿಯ ಚಿತ್ರವನ್ನು ನಿರ್ಮಿಸುವ ಭಾಗ್ಯ ನಮಗೆ ಸಿಕ್ಕಿರುವುದು ಸಂತೋಷದ ವಿಷಯವೆ. ಅಲ್ಲದೆ, ಈ ಚಿತ್ರವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೆ ಜನ್ಮದಿನದಂದು ಬಿಡುಗಡೆಗೊಳ್ಳುತ್ತಿ ರುವುದು ಕೂಡ ನಮಗೆ ಹೆಮ್ಮೆಯ ವಿಷಯ ಎಂದು ಚಿತ್ರತಂಡ ಹೇಳಿಕೊಂಡಿದೆ.
ಈ ಚಿತ್ರವು ರಾಜ್ಯಾದ್ಯಂತ ಸುಮಾರು 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

Write A Comment