ಕರ್ನಾಟಕ

ಅಂತರ್ಜಾತಿ ವಿವಾಹಕ್ಕೆ 4 ಲಕ್ಷ ರೂ. ಸಹಾಯ ಧನ

Pinterest LinkedIn Tumblr

marriageಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ವರ್ಷಪೂರ್ತಿ ಆಚರಣೆ ಮಾಡುತ್ತಿದ್ದು , ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಸರಳ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಳ ವಿವಾಹವಾಗುವ ಎಸ್ಸಿ, ಎಸ್ಟಿ ವಧುವರರಿಗೆ 50 ಸಾವಿರ ರೂ.ವರೆಗೂ ಸಹಾಯ ಧನ ನೀಡಲಾಗುವುದು. ಅದೇ ರೀತಿ ಅಂತರ್ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿ, ವರ್ಗದವರಿಗೆ 2ರಿಂದ 4 ಲಕ್ಷ ರೂ.ವರೆಗೂ ಸಹಾಯಧನ ನೀಡಲಾಗುವುದು.

ಈ ಸಹಾಯ ಧನದ ಪ್ರಮಾಣ ಹೆಚ್ಚಿಸುವ ಚಿಂತನೆ ಇದೆ ಎಂದರು. ನಾಳೆ ಅಂಬೇಡ್ಕರ್ ಅವರ 125ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಗುಲ್ಬರ್ಗ ವಿಭಾಗದ ನಾಗನೂರು ಮಠದಲ್ಲಿ , ಮೈಸೂರು ವಿಭಾಗದ ಸುತ್ತೂರು ಮಠದಲ್ಲಿ, ಬೆಳಗಾವಿ ವಿಭಾಗದ ಕೂಡಲಸಂಗಮದಲ್ಲಿ ಸರಳ ವಿವಾಹ ನಡೆಸಲು ಉದ್ದೇಶಿಸಿದ್ದು, ಬೆಂಗಳೂರು ವಿಭಾಗದ ಸರಳ ವಿವಾಹ ಚಿತ್ರದುರ್ಗದಲ್ಲಿ ಮಾಡಬೇಕೇ ಅಥವಾ ಬೇರೆಡೆ ಮಾಡಬೇಕೆ ಎಂಬುದನ್ನು ಸದ್ಯದಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಅಂಬೇಡ್ಕರ್ ಜಯಂತಿಯನ್ನು ವರ್ಷಪೂರ್ತಿ ಅರ್ಥಪೂರ್ಣವಾಗಿ ಆಚರಿಸಲು ಸಾಕ್ಷ್ಯಚಿತ್ರ , ಅಂಬೇಡ್ಕರ್ ಕುರಿತ ನಾಟಕ ಪದರ್ಶನ, ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಚಾರಾಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಂಬೇಡ್ಕರ್ ಬರಹ, ಭಾಷಣ ಕುರಿತ 22 ಸಂಪುಟ ಅನುವಾದವನ್ನು 4.5ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿ ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದರು.

ವಾಸ್ತವ್ಯ:

ಏ.15ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೆರೆ ಕಾಡು ಕೊರಗರ ಕಾಲೋನಿಯಲ್ಲಿ ತಾವು ವಾಸ್ತವ್ಯ ಮಾಡಲಿದ್ದು, 15ರ ಬೆಳಗ್ಗೆಯಿಂದ 16ರವರೆಗೂ ಅಲ್ಲೇ ವಾಸ್ತವ್ಯವಿದ್ದು ಕೊರಗರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಈವರೆಗೆ ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಚಿತ್ರದುರ್ಗ ಜಿಲ್ಲೆಗಳ ಆದಿವಾಸಿ, ಬುಡಕಟ್ಟು , ಹಾಡಿ, ಕೋಡು 6 ಕಡೆ ವಾಸ್ತವ್ಯ ಮಾಡಿದ್ದು, ಮೂಲಭೂತ ಅಗತ್ಯತೆ ಒದಗಿಸಲು 96 ಕೋಟಿ ರೂ. ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

Write A Comment