ಕರ್ನಾಟಕ

ಎಂಜಿ ರಸ್ತೆ ಟೈಮ್ಸ್‌ ಕಟ್ಟಡದಲ್ಲಿ ದಟ್ಟ ಹೊಗೆ, ಕೆಲಕಾಲ ಆತಂಕ

Pinterest LinkedIn Tumblr

timesಬೆಂಗಳೂರು: ನಗರದ ಎಂ.ಜಿ ರಸ್ತೆಯ ಎಸ್‌ ಆ್ಯಂಡ್‌ ಬಿ ಟವರ್‌ನ ನೆಲಮಾಳಿಗೆಯಲ್ಲಿ ಬುಧವಾರ ಮಧ್ಯಾಹ್ನ ದಟ್ಟ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು. ಈ ಕಟ್ಟಡದಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಸೇರಿದಂತೆ ಹಲವು ಕಂಪೆನಿಗಳ ಕಚೇರಿಗಳಿವೆ.
ಈ ಕಟ್ಟಡದಿಂದ ಕೂಗಳತೆ ದೂರದಲ್ಲಿರುವ ನವರತನ್‌ ಜ್ಯುವೆಲರ್ಸ್‌ ಮಳಿಗೆಯಲ್ಲಿ ವರ್ಷದ ಹಿಂದಷ್ಟೇ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಕಟ್ಟಡದಿಂದ ಹೊಗೆ ಹೊರಬರುತ್ತಿದ್ದಂತೆ ಸಾರ್ವಜನಿಕರು ಆತಂಕಗೊಂಡು ಕಟ್ಟಡದ ಸುತ್ತ ಗುಂಪುಗೂಡಿದರು. ಅಕ್ಕ ಪಕ್ಕದ ಮಳಿಗೆಗಳನ್ನು ಮುಚ್ಚಲಾಯಿತು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನೆಲಮಾಳಿಗೆಯಲ್ಲಿದ್ದ ಜನರೇಟರ್‌ನಿಂದ ಹೊಗೆ ಬರುತ್ತಿರುವುದನ್ನು ಪತ್ತೆ ಹಚ್ಚಿದರು. ‘ವಿದ್ಯುತ್‌ ಹೋಗಿದ್ದರಿಂದ ಕೆಲವು ಗಂಟೆಗಳಿಂದ ನಿರಂತರವಾಗಿ ಜನರೇಟರ್‌ ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ ವಿಪರೀತ ಬಿಸಿಯಾಗಿ ಅದರಿಂದ ದಟ್ಟ ಹೊಗೆ ಹೊರಬಂದಿದೆ. ಸದ್ಯ ಜನರೇಟರ್‌ ಸ್ಥಗಿತಗೊಳಿಸಲಾಗಿದ್ದು, ಹೊಗೆ ಬರುವುದು ನಿಂತಿದೆ, ಆತಂಕ ಪಡುವ ಅಗತ್ಯವಿಲ್ಲ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
‘ಜನರೇಟರ್‌ ಟ್ಯಾಂಕ್‌ನಲ್ಲಿ ಭರ್ತಿ ಡೀಸೆಲ್‌ ಇತ್ತು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು. ಹಾಗೇನಾದರೂ ಆಗಿದ್ದರೆ ಇಡೀ ಕಟ್ಟಡವೇ ಅಗ್ನಿಗೆ ಆಹುತಿಯಾಗುತ್ತತ್ತು. ಸಕಾಲಿಕ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

Write A Comment