
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಿಚಾರಕ್ಕೆ ಸೇನಾ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರ ನಡುವೆ ಕಾಮರಾಜ ರಸ್ತೆಯಲ್ಲಿ ಮಂಗಳವಾರ ಸಂಜೆ ಗಲಾಟೆ ನಡೆದು, ಒಂದು ತಾಸಿಗೂ ಹೆಚ್ಚು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಏಕಮುಖ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಬಂದ ಇಬ್ಬರು ಸೇನಾ ಸಿಬ್ಬಂದಿಯನ್ನು ಪೊಲೀಸರು ತಡೆದಿದ್ದರಿಂದ ಗಲಾಟೆ ಪ್ರಾರಂಭವಾಯಿತು. ನಂತರ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಗಲಾಟೆಯಲ್ಲಿ ಶಿವಾಜಿನಗರ ಠಾಣೆ ಎಸ್ಐ ಕೃಷ್ಣಮೂರ್ತಿ, ಕಾನ್ಸ್ಟೆಬಲ್ಗಳಾದ ಎನ್.ಸುಧೀಂದ್ರ ಹಾಗೂ ರಾಜಶೇಖರ್ ಎಂಬುವರು ಗಾಯಗೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಕಾಮರಾಜ ರಸ್ತೆಯಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ (ಎಎಸ್ಸಿ) ಕ್ಯಾಪ್ಟನ್ ಆಗಿರುವ ಚಂದ್ರು ಹಾಗೂ ಯೋಧ ಕೆ.ಬಿ.ಸಿಂಗ್, ಸಂಜೆ 5.30ರ ಸುಮಾರಿಗೆ ವೀರಪಿಳ್ಳೈ ಸ್ಟ್ರೀಟ್ ಮಾರ್ಗವಾಗಿ ಬೈಕ್ನಲ್ಲಿ ಕಾಮರಾಜ ರಸ್ತೆಗೆ ಬಂದರು. ಏಕಮುಖ ಸಂಚಾರ ವ್ಯವಸ್ಥೆಯಿರುವ (ಒನ್ವೇ) ರಸ್ತೆಯಲ್ಲಿ ಬಂದಿದ್ದರಿಂದ ಸಿಬ್ಬಂದಿ ಅವರ ಬೈಕ್ ತಡೆದು ₹ 100 ದಂಡ ಕಟ್ಟುವಂತೆ ಹೇಳಿದ್ದರು’ ಎಂದು ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ವಿವರಿಸಿದರು.
‘ಸೇನಾ ಸಿಬ್ಬಂದಿಯಿಂದಲೂ ದಂಡ ವಸೂಲಿ ಮಾಡುತ್ತೀರಾ ಎಂದು ಗಲಾಟೆ ಪ್ರಾರಂಭಿಸಿದ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದಂಡ ಕಟ್ಟದೆ ವಾಹನ ಬಿಡುವುದಿಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದಾಗ, ಅವರು ₹ 100 ದಂಡ ಪಾವತಿಸಿ ಎಎಸ್ಸಿಗೆ ತೆರಳಿದ್ದಾರೆ’.
‘15 ನಿಮಿಷಗಳ ನಂತರ ಸುಮಾರು 12 ಮಂದಿ ಸಿಬ್ಬಂದಿಯ ಜತೆ ಮತ್ತೆ ಕಾಮರಾಜ ಜಂಕ್ಷನ್ಗೆ ಬಂದ ಅವರು, ಎಸ್ಐ ಹಾಗೂ ಕಾನ್ಸ್ಟೆಬಲ್ಗಳನ್ನು ಮನಬಂದಂತೆ ಥಳಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಗಾಬರಿಗೊಂಡ ಸಿಬ್ಬಂದಿ, ಕೂಡಲೇ ವಾಕಿಟಾಕಿ ಮೂಲಕ ಕಮರ್ಷಿಯಲ್ ಸ್ಟ್ರೀಟ್, ಫ್ರೇಜರ್ ಟೌನ್ ಹಾಗೂ ಶಿವಾಜಿನಗರ ಸಂಚಾರ ಠಾಣೆಗೆ ವಿಷಯ ತಿಳಿಸಿದ್ದಾರೆ’.
‘ಸ್ವಲ್ಪ ಸಮಯದಲ್ಲೇ ಮೂರೂ ಠಾಣೆಗಳಿಂದ 20ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೆಚ್ಚು ಪೊಲೀಸರು ಜಮಾಯಿಸಿದ್ದನ್ನು ಕಂಡು ಸೇನಾ ಸಿಬ್ಬಂದಿ ಕೂಡ ಇನ್ನಷ್ಟು ಮಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಹೀಗೆ ಸೈನಿಕರು–ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದು ಕಾಮರಾಜ ಜಂಕ್ಷನ್ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ’.
‘ಕೊನೆಗೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯ ಪೊಲೀಸರು ಸಹ ಸಂಚಾರ ವಿಭಾಗದ ಸಿಬ್ಬಂದಿಯ ನೆರವಿಗೆ ಬಂದಿದ್ದಾರೆ. ಆ ನಂತರ ಸೈನಿಕರು ಎಎಸ್ಸಿ ಕೇಂದ್ರಕ್ಕೆ ಮರಳಿದ್ದಾರೆ. ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಿ.ಸಿ ಕ್ಯಾಮೆರಾ ಪರಿಶೀಲನೆ
‘ಗಲಾಟೆಯ ದೃಶ್ಯಗಳು ಜಂಕ್ಷನ್ನಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸೇನಾ ಸಿಬ್ಬಂದಿಯು ಎಸ್ಐ ಕೃಷ್ಣಮೂರ್ತಿ ಅವರ ಬಟ್ಟೆ ಹರಿದು ಹೊಡೆದಿದ್ದಾರೆ. ಈ ಘಟನೆಯನ್ನು ಎಸಿಎಸ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕಮಿಷನರ್ ಸಭೆ: ‘ಘಟನೆ ಸಂಬಂಧ ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಅವರು ಬುಧವಾರ ಎಎಸ್ಸಿ ಕೇಂದ್ರದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.