ಮನೋರಂಜನೆ

ಆರ್ ಸಿಬಿಗೆ ಶುಭಾರಂಭ; ಹೈದರಾಬಾದ್ ವಿರುದ್ಧ 45 ರನ್ ಗಳ ಭರ್ಜರಿ ಜಯ

Pinterest LinkedIn Tumblr

kohli-de-villiers-run

ಬೆಂಗಳೂರು: ಐಪಿಎಲ್-9 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಬೆಂಗಳೂರು ತಂಡ ನೀಡಿದ 228 ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಹೈದರಾಹಾದ್ ತಂಡ ವಾರ್ನರ್ ಹೋರಾಟದ ಆರ್ಧಶತಕದ ನಡುವೆಯೂ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬೆಂಗಳೂರು ತಂಡದ ಎದುರು 45 ರನ್ ಗಳ ಅಂತರದಿಂದ ಸೋಲು ಕಂಡಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ನಾಯಕ ವಿರಾಯ್ ಕೊಹ್ಲಿ (75 ರನ್) ಮತ್ತು ಎಬಿಡಿ ವಿಲಿಯರ್ಸ್ (82ರನ್) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಬರೊಬ್ಬರಿ 227 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಪಂದ್ಯದ 2ನೇ ಓವರ್ ನಲ್ಲಿಯೇ ದೈತ್ಯ ಕ್ರಿಸ್ ಗೇಯ್ಲ್ ರನ್ನು ಕಳೆದುಕೊಂಡ ಆರ್ ಸಿಬಿ ನಿಜಕ್ಕೂ ಒತ್ತಡಕ್ಕೆ ಸಿಲುಕಿತ್ತು. ಆದರೆ ಆ ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಹೈದರಾಬಾದ್ ತಂಡದ ಬೌಲರ್ ಗಳ ಮೇಲೆ ಸವಾರಿ ಮಾಡುವ ಮೂಲಕ ಆರ್ ಸಿಬಿಯನ್ನು ಆರಂಭಿಕ ಆಘಾತದಿಂದ ಹೊರತಂದರು.

ಈ ನಡುವೆ ಉತ್ತಮವಾಗಿ ಆಡಿ 75 ರನ್ ಗಳಿಸಿದ್ದ ಕೊಹ್ಲಿ 16ನೇ ಓವರ್ ನಲ್ಲಿ ಭರ್ಜರಿ ಹೊಡೆತ ಬಾರಿಸುವ ನಿಟ್ಟಿನಲ್ಲಿ ಭುವನೇಶ್ವರ್ ಕುಮಾರ್ ಗೆ ಕ್ಲೀನ್ ಬೋಲ್ಡ್ ಆದರು. ಬಳಿಕ ಡಿವಿಲಿಯರ್ಸ್ ಕೂಡ 18ನೇ ಓವರ್ ನಲ್ಲಿ ಔಟ್ ಆದರು. ಬಳಿಕ ಬಂದ ಸರ್ಫಾರಾಜ್ ಖಾನ್ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಆರ್ ಸಿಬಿ 200 ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು.

ಈ ಮೊತ್ತವನ್ನು ಬೆನ್ನುಹತ್ತಿದ ಹೈದರಾಬಾದ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಭರ್ಜರಿ ಆರಂಭ ಒದಗಿಸಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವಾರ್ನರ್ ಆರ್ ಸಿಬಿ ಬೌಲರ್ ಗಳಿಗೆ ನಿಜಕ್ಕೂ ಸಿಂಹ ಸ್ವಪ್ನವಾಗಿದ್ದರು. ವಾರ್ನರ್ 58 ರನ್ ಗಳಿಸಿದ್ದ ವೇಳೆ ಬೌಲಿಂಗ್ ನಲ್ಲಿ ಬದಲಾವಣೆ ತಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರಯತ್ನ ಫಲ ನೀಡಿತ್ತು. ಶೇನ್ ವಾಟ್ಸನ್ ಬೌಲಿಂಗ್ ನಲ್ಲಿ ವಾರ್ನರ್ ದೊಡ್ಡ ಹೊಡೆತಕ್ಕೆ ಕೈಹಾಕಿ ಮಿಲ್ನಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡ ವಾರ್ನರ್ ಬಳಿಕ ಶಿಖರ್ ಧವನ್ ಕೂಡ 8 ರನ್ ಗಳಿಸಿ ಔಟ್ ಆದರು. ಈ ವೇಳೆ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಹೆನ್ರಿಕ್ಸ್ (19ರನ್), ಓಜಾ (ಶೂನ್ಯ), ಹೂಡಾ (6 ರನ್) ಅವರ ವಿಕೆಟ್ ಗಳು ಉರುಳುವುದರೊಂದಿಗೆ ಹೈದರಾಬಾದ್ ಗೆಲುವಿನ ಕನಸು ಕಮರಿತು.

ಆದರೂ ಹೋರಾಟ ಬಿಡದ ಆಶಿಶ್ ರೆಡ್ಡಿ 32 ರನ್ ಗಳಿಸಿದರಾದರೂ, ವಾಟ್ಸನ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಆರ್ ಸಿಬಿ ತನ್ನ ಮೊದಲ ಪಂದ್ಯದಲ್ಲಿ 45 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಆರ್ ಸಿಬಿ ಪರ ವಾಟ್ಸನ್ ಮತ್ತು ಚಾಹಲ್ ತಲಾ 2 ವಿಕೆಟ್ ಗಳಿಸಿದರೆ, ಮಿಲ್ನೆ ಮತ್ತು ಪರ್ವೇಜ್ ರಸೂಲ್ ತಲಾ 1 ವಿಕೆಟ್ ಗಳಿಸಿದರು.

Write A Comment