ಕರ್ನಾಟಕ

ಶಾಂತಿನಗರ ಸಂಪೂರ್ಣ ಸಾಕ್ಷರತಾ ಕ್ಷೇತ್ರವನ್ನಾಗಿಸಲು ಯೋಜನೆಗೆ ಚಾಲನೆ : ಎನ್.ಎ. ಹ್ಯಾರಿಸ್

Pinterest LinkedIn Tumblr

saಬೆಂಗಳೂರು, ಏ.12-ಮುಂದಿನ 36 ತಿಂಗಳಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ಸಾಕ್ಷರತಾ ಕ್ಷೇತ್ರವನ್ನಾಗಿಸಲು ಯೋಜನೆ ರೂಪಿಸಲಾಗಿದ್ದು, ಈ ಆಂದೋಲನಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನಾಳೆ ನಗರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ. ಎನ್.ಎ.ಹ್ಯಾರಿಸ್ ಪ್ರತಿಷ್ಠಾನ, ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ ಮತ್ತು ಗಾಂಧಿ ಸ್ಟಡೀಸ್ ಮತ್ತಿತರ ಎನ್‌ಜಿಒಗಳ ಸಹಕಾರದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ ಈ ಆಂದೋಲನ ಆರಂಭಿಸಲಾಗಿದೆ. ಇನ್ನು ಮೂರು ವರ್ಷಗಳಲ್ಲಿ ಶಾಂತಿನಗರ ಕ್ಷೇತ್ರ ಶೇ.100ರಷ್ಟು ಸಾಕ್ಷರತಾ ಕ್ಷೇತ್ರವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಅಕ್ಷರ ಕಲಿಯುವ ಅವಕಾಶ ಮತ್ತು ಉಚಿತ ಶಿಕ್ಷಣ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಲು ವ್ಯವಸ್ಥಿತವಾದ ಯೋಜನೆ ರೂಪಿಸಲಾಗಿದೆ. ಉಚಿತ ಶಾಲಾ ಕಿಟ್ ವಿತರಣೆ, ವಿದ್ಯಾರ್ಥಿ ವೇತನ ಇತ್ಯಾದಿ ಯೋಜನೆಗಳನ್ನು ಪ್ರತಿಷ್ಠಾನ ವತಿಯಿಂದ ಕೈಗೊಳ್ಳಲಾಗಿದೆ. ಹಿರಿಯರಿಗೆ ವಯಸ್ಕರ ಶಿಕ್ಷಣ ಯೋಜನೆ ಜಾರಿಗೊಳಿಸಲಾಗಿದೆ. ಅಶೋಕನಗರದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ 8 ವರ್ಷದಿಂದ ಮಕ್ಕಳು ಅರ್ಧದಲ್ಲೇ ಶಾಲೆ ಬಿಡದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ ಬ್ರಿಗೇಡ್ ಮತ್ತು ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಲ್ಲಿ ಎಲ್ಲರನ್ನು ಸಾಕ್ಷರರನ್ನಾಗಿ ಮಾಡುತ್ತೇವೆಂದು ಪ್ರಮಾಣವಚನ ಸ್ವೀಕರಿಸಲಾಗುವುದು, ಈ ಬಗ್ಗೆ ಅರಿವು ಮೂಡಿಸಲು ಸಹಿ ಸಂಗ್ರಹ ಆಂದೋಲನಕ್ಕೆ ದಿಗ್ವಿಜಯ್ ಸಿಂಗ್ ಚಾಲನೆ ನೀಡಲಿದ್ದಾರೆ. ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಾಧಕರಿಗೆ ಸನ್ಮಾನ ನಡೆಯಲಿದೆ.

ರಾತ್ರಿ 11 ಗಂಟೆಗೆ ಮೊಟಾ ರೋಯಲ್ ಆರ್ಕೆಡ್‌ನಿಂದ ಆಸ್ಟಿನ್ ಟೌನ್‌ವರೆಗೆ ಜಾಥಾ ನಡೆಯಲಿದೆ. ರಾತ್ರಿ 12 ಗಂಟೆಗೆ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಮರ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಗ್ಲೋಬಲ್ ಕನ್ಸರ್ನ್ ಇಂಡಿಯಾದ ಪ್ರತಿನಿಧಿ ಬೃಂದಾ ಅಡಿಗೆ ಮತ್ತಿತರರು ಇದ್ದರು.

Write A Comment