ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್‌ವೈ ಆಯ್ಕೆಯಿಂದ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ : ಸುರೇಶ್‌ಕುಮಾರ್

Pinterest LinkedIn Tumblr

suಬೆಂಗಳೂರು, ಏ.12- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ, ಹೆದರಿಕೆ ಉಂಟಾಗಿದೆ ಎಂದು ಬಿಜೆಪಿ ವಕ್ತಾರ ಮತ್ತು ಶಾಸಕ ಸುರೇಶ್‌ಕುಮಾರ್ ಇಂದಿಲ್ಲಿ ಟೀಕಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರಾದ ಉಗ್ರಪ್ಪ, ಎಚ್.ಎಂ.ರೇವಣ್ಣ, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ಣನವರ್ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದರು.

ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಾಗಿದ್ದರೆ, ಕಾಂಗ್ರೆಸ್ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗಿದ್ದು, ಗಾಬರಿ ಉಂಟಾಗಿದೆ ಎಂದರು. ಪಕ್ಷದ ವರಿಷ್ಠರು ಎಲ್ಲರ ಅಭಿಪ್ರಾಯ ಪಡೆದ ಬಳಿಕವೇ ಬಿಎಸ್‌ವೈ ಅವರನ್ನು ನೇಮಕ ಮಾಡಿದ್ದಾರೆ. ಉಗ್ರಪ್ಪ ಅವರು ಸರ್ಕಾರಕ್ಕೆ ಸಲಹೆ ನೀಡಲಿ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿ ನಿಭಾಯಿಸಲಿ ಎಂದರು. ಕಾಂಗ್ರೆಸ್ ಮನೆಯನ್ನು ಚೆನ್ನಾಗಿಟ್ಟುಕೊಂಡು ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊಟ್ಟು ಉತ್ತಮ ಆಡಳಿತ ನಡೆಸಲು ಸರ್ಕಾರಕ್ಕೆ ಸಲಹೆ ಕೊಡಲಿ ಎಂದು ಹೇಳಿದ ಅವರು, ಹೊಟೇಲ್‌ಗಳಲ್ಲಿ ಸಭೆ ಮಾಡುವುದು, ದೆಹಲಿ ಪ್ರವಾಸ ಕೈ ಬಿಟ್ಟು ಬರ ಪೀಡಿತರ ನೆರವಿಗೆ ಧಾವಿಸಲಿ ಎಂದರು.

ಬಿ.ಎಸ್.ಯಡಿಯೂರಪ್ಪ ಹೋದ ಕಡೆ ತಮ್ಮ ತಂಡ ಹೋಗುತ್ತೆ ಎಂದು ಉಗ್ರಪ್ಪ ಹೇಳಿದ್ದಾರೆ. ಅದು ಒಳ್ಳೆಯ ಕೆಲಸ. ಆಗ ಯಡಿಯೂರಪ್ಪ ಅವರಿಗೆ ಸಿಗುವ ಸ್ವಾಗತ, ಜನರ ಮನಸ್ಥಿತಿಯ ಅರಿವು ಆ ತಂಡಕ್ಕಾಗಲಿದೆ ಎಂದು ಹೇಳಿದರು.

ಸೋರಿಕೆ ಸರ್ಕಾರ: ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮಾಮೂಲಿಯಾಗಿರುವ ರಾಜ್ಯ ಸರ್ಕಾರ ಸೋರಿಕೆಯ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಟೀಕಿಸಿದರು. ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾಯಿತು. ಇದೀಗ ಜಾತಿ ಗಣತಿ ಸೋರಿಕೆಯಾಗಿದೆ. ಪರೋಕ್ಷವಾಗಿ ಸರ್ಕಾರವೇ ಜಾತಿ ಗಣತಿ ಸೋರಿಕೆ ಮಾಡಿದೆ ಎಂಬ ಅನುಮಾನ ಉಂಟಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿಯಂತೆ 12 ತಂಡಗಳನ್ನು ಬರ ಅಧ್ಯಯನಕ್ಕಾಗಿ ರಚಿಸಲಾಗಿದೆ. ಈಗಾಗಲೇ ಎಂಟು ತಂಡಗಳು ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ನಷ್ಟ, ಜಾನುವಾರುಗಳಿಗೆ ಮೇವು ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವಸ್ತುಸ್ಥಿತಿ ವರದಿಯನ್ನು ರಾಜ್ಯ ಸರ್ಕಾರ ಮತ್ತು ಪಕ್ಷಕ್ಕೆ ನೀಡಲಿದೆ. ಏ.14ರ ನಂತರ ಮತ್ತೆ ನಾಲ್ಕು ತಂಡಗಳು ಬರ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಕೈಗೊಳ್ಳಲಿವೆ ಎಂದು ಅವರು ಹೇಳಿದರು.

Write A Comment