ಅಂತರಾಷ್ಟ್ರೀಯ

ಬೆಂಗಳೂರಿನ ಅಜ್ಜನಿಗಾಗಿ ಅಗ್ಗದ ಶ್ರವಣ ಯಂತ್ರ ಆವಿಷ್ಕರಿಸಿದ 16 ವರ್ಷದ ಅನಿವಾಸಿ ಭಾರತೀಯ ಬಾಲಕ

Pinterest LinkedIn Tumblr

earಹೂಸ್ಟನ್, ಏ.12- ಬೆಂಗಳೂರಿನಲ್ಲಿರುವ ತನ್ನ ಅಜ್ಜ ಶ್ರವಣ ಸಮಸ್ಯೆಯಿಂದ (ಕಿವುಡು) ಬಳಲುವುದನ್ನು ಕಂಡ ಇಲ್ಲಿನ ಅನಿವಾಸಿ ಭಾರತೀಯ ಬಾಲಕನೊಬ್ಬ ಅತ್ಯಂತ ಅಗ್ಗದ ಬೆಲೆ ಹಾಗೂ ಸ್ವಯಂಚಾಲಿತ ಶ್ರವಣ ಸಾಧನವೊಂದನ್ನು ಆವಿಷ್ಕರಿಸಿ ಇಡೀ ಅಮೆರಿಕದ ಗಮನ ಸೆಳೆದಿದ್ದಾನೆ. ಇಲ್ಲಿನ ಕಂಟುಕಿ ಲೂಯಿಸ್‌ವಿಲ್ಲೆ ನಗರದ ನಿವಾಸಿ, ಭಾರತ ಮೂಲದ 16 ವರ್ಷದ ಬಾಲಕ ಮುಕುಂದ ವೆಂಕಟಕೃಷ್ಣನ್, ಜೆಫರ್‌ಸನ್ ಕೌಂಟಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಇದನ್ನು ಪ್ರದರ್ಶಿಸಿ ಬಹುಮಾನ ಗಳಿಸಿದ್ದಾನೆ.

ಬೆಂಗಳೂರಿನ ಅಜ್ಜನ ಮನೆಗೆ ಬಂದಿದ್ದಾಗ ಅಜ್ಜನ ಪರಿಸ್ಥಿತಿ ಕಂಡು ನೊಂದ ಮುಕುಂದ್ ಕಳೆದ ಎರಡು ವರ್ಷಗಳಿಂದ ಸತತ ಶ್ರಮಿಸಿ ಈ ಯಂತ್ರ ಕಂಡುಹಿಡಿದಿದ್ದು, ಇದರ ಬೆಲೆ ಕೇವಲ 60 ಡಾಲರ್. ಸುಮಾರು 3500ರೂ..! ಬೆಂಗಳೂರು ಸೇರಿದಂತೆ ಎಲ್ಲ ಕಡೆ ಈ ಶ್ರವಣ ಸಾಧನದ ಬೆಲೆ ಸಾವಿರಾರು ಡಾಲರ್. ಇದನ್ನು ಅಳವಡಿಸುವ ವೈದ್ಯರಿಗೂ ಸಾವಿರಾರು ಡಾಲರ್ ಕೊಡಬೇಕು. ಆದರೆ, ಮುಕುಂದ್ ಕಂಡುಹಿಡಿದಿರುವ ಈ ಯಂತ್ರಕ್ಕೆ ವೈದ್ಯರ ನೆರವಿನ ಅಗತ್ಯವೇ ಇಲ್ಲ. ಕಿವುಡಿನ ಪ್ರಮಾಣಕ್ಕೆ ತಕ್ಕಂತೆ ಅದೇ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

ಮುಕುಂದ್ ಸದ್ಯ ಇಲ್ಲಿನ ಡುಪೊಂಟ್ ಮ್ಯಾನ್ಯುವಲ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ಅಜ್ಜನ ಶ್ರವಣ ಸಮಸ್ಯೆಯೇ ನನಗೆ ಇದನ್ನು ತಯಾರಿಸಲು ಸ್ಫೂರ್ತಿಯಾಯಿತು ಎನ್ನುತ್ತಾನೆ ಮುಕುಂದ್. ಈ ಬೇಸಿಗೆ ರಜೆಗೆ ನಾನು ಬೆಂಗಳೂರಿಗೆ ತೆರಳುತ್ತಿದ್ದು, ಈ ಹೊಸ ಯಂತ್ರವನ್ನು ನನ್ನ ಅಜ್ಜನಿಗೆ ಕೊಡುತ್ತೇನೆ ಎನ್ನುತ್ತಾನೆ ಮುಕುಂದ್.

Write A Comment