ಕರ್ನಾಟಕ

ಹಾವೇರಿ: ಎಳನೀರು ₹ 60 ರಿಂದ ₹ 100ರವರೆಗೆ ಮಾರಾಟ

Pinterest LinkedIn Tumblr

11hvr1A-niruಹಾವೇರಿ: ‘ರಾಜ್ಯದಲ್ಲಿ ಕುಡಿಯುವ ನೀರಿಗೆ, ದನ ಕರುಗಳ ಮೇವುಗಳಿಗೆ, ಕೆರೆ, ಕಟ್ಟೆಗಳಿಗೆ ಭೀಕರವಾದ ‘ಬರ’ ಆವರಿಸಿರುವುದನ್ನು ನಾವು ಕಾಣಬಹುದು. ಆದರೆ, ಅತ್ತ ಮಲೆನಾಡು ಎನಸಿಕೊಳ್ಳದ, ಇತ್ತ ಬಯಲು ಸೀಮೆಯೂ ಆಗದೆ ಅರೆಮಲೆನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಹಾವೇರಿ ಜಿಲ್ಲೆಯಲ್ಲಿ ಇಂದು (ತೆಂಗಿನ) ಎಳನೀರಿಗೂ ‘ಬರ’ ಆವರಿಸಿಕೊಂಡಿದೆ.
ಜಿಲ್ಲೆಯಾದ್ಯಂತ ಎಳನೀರಿನ ಮಾರಾಟ ಜೋರಾಗಿದ್ದು, ಬೇಡಿಕೆಯೂ ಸಹ ಸ್ಪಲ್ಪ ಮಟ್ಟಿಗೆ ಹೆಚ್ಚಾಗಿತ್ತು. ಆದರೆ, ಸೋಮವಾರ ಮಾತ್ರ ನಗರಾದ್ಯಂತ ಕೇವಲ ಬೆರಳಣಿಕೆ ಅಷ್ಟು ಅಂಗಡಿಗಳಲ್ಲಿ ಎಳನೀರು ಮಾರಾಟ ಮಾಡುತ್ತಿದ್ದು, ಗ್ರಾಹಕರು ಒಂದು ಎಳನೀರಿಗೆ ಸುಮಾರು ₹ 60 ರಿಂದ ₹ 80 ವರೆಗೆ ಹಣ ನೀಡಿ, ಎಳನೀರು ಖರೀದಿ ಮಾಡಿದ್ದಾರೆ.
‘ಕಳೆದ ಎರಡು –ಮೂರು ವಾರಗಳಿಂದ ದಿನಕ್ಕೆ 50 ರಿಂದ 100 ವರೆಗೆ ಮಾರಾಟವಾಗುತ್ತಿದ್ದ ಎಳನೀರು, ಇಂದು ₹ 200 ರಿಂದ ₹ 300ವರೆಗೆ ವ್ಯಾಪಾರವಾಗುತ್ತಿವೆ. ಅಲ್ಲದೇ, ಶಿರಸಿ, ಕುಮುಟಾ, ಕಾರವಾರ, ಉಡುಪಿ, ದಾವಣಗೆರೆ, ಗದಗ, ಹುಬ್ಬಳ್ಳಿ, ಶಿವಮೊಗ್ಗ, ಹರಿಹರ ಸೇರಿದಂತೆ ಮತ್ತಿತರ ಭಾಗಗಳಿಂದ ಎಳನೀರನ್ನು ಆವಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಆ ಭಾಗದಲ್ಲಿಯೂ ಸಹ ಎಳನೀರು ಇಲ್ಲದ ಕಾರಣ, ಜಿಲ್ಲೆಯ ಜನತೆಗೆ ಇಂದು ಸಮರ್ಪಕವಾಗಿ ಎಳನೀರು ದೊರೆಯುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಜಯಲಾಲ್‌ ಮತ್ತಿಕಟ್ಟಿ.
ಎಲ್ಲವೂ ತುಟ್ಟಿ: ಬೇಸಿಗೆಯ ದಿನಗಳಲ್ಲಿ ತಂಪು ಪಾನೀಯ, ಆರೋಗ್ಯಕ್ಕೆ ಹಿತ ನೀಡುವ ಹಣ್ಣುಗಳಿಗೆ ಭಾರೀ ಬೇಡಿಕೆ. ಹಾಗೆಯೇ ತೆಂಗಿನ ಎಳನೀರಿಗೂ ಫುಲ್ ಡಿಮ್ಯಾಂಡ್. ಇದರ ಪರಿಣಾಮ ಸದ್ಯ ಮಾರುಕಟ್ಟೆಯಲ್ಲಿ ಹಣ್ಣಿನ ದರ ಭಾರೀ ಏರಿಕೆ ಕಂಡಿದೆ. ಹಾಗೆಯೇ ಎಳನೀರಿನ ದರವೂ ಇಂದು ₹ 60 ರಿಂದ 100ರ ಗಡಿ ದಾಟಿದೆ.
ಮಳೆಯಿಂದ ತಾಪ ಹೆಚ್ಚಳ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿರುವುದು ಒಂದೆಡೆ ಜನತೆಗೆ ಆತಂಕದ ವಿಚಾರವಾದರೆ, ಮತ್ತೊಂದೆಡೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾರ್ಚ್‌ ಹಾಗೂ ಏಪ್ರಿಲ್‌ ನಿಂದೀಚೆಗೆ ಆಗಾಗ್ಗೆ ಸುರಿಯುವ ಅಲ್ಪ ಮಳೆ ತಾಪಮಾನದ ಹೆಚ್ಚಳಕ್ಕೆ ದಾರಿಯಾಗುತ್ತಿದ್ದು, ಮತ್ತಷ್ಟು ತೊಂದರೆ ಸೃಷ್ಟಿಸುತ್ತಿದೆ. ಇದರಿಂದ ಚಿಕ್ಕ ಪುಟ್ಟ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಅಲ್ಲದೇ, ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಎಳನೀರಿಗೆ ಮೊರೆ ಹೋಗುತ್ತಿದ್ದು, ಅನಿವಾರ್ಯವಾಗಿ ವ್ಯಾಪಾರಿಗಳು ಕೇಳಿದಷ್ಟು ಹಣ ನೀಡಿ, ಎಳನೀರನ್ನು ಖರೀದಿಸಬೇಕಾಗಿದೆ. ವ್ಯಾಪಾರಿಗಳಿಗೆ ಇದು ಸಂತಸದ ಸಮಯ. ಆದರೆ, ಖರೀದಿಸುವವರಿಗೆ ಮಾತ್ರ ಸಂಕಷ್ಟದ ಸಮಯ’ ಎನ್ನುತ್ತಾರೆ ಗ್ರಾಹಕ ಗುರುರಾಜ ಭಂಡಾರಿ.
* * *
ಜಿಲ್ಲೆಯಾದ್ಯಂತ ದಿನೇ ದಿನೇ ಎಳನೀರಿನ ಬೇಡಿಕೆ ಹೆಚ್ಚಾಗುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಒಂದು ಎಳನೀರಿಗೆ ₹ 100 ರಿಂದ ₹ 150ರ ವರೆಗೆ ಮಾರಾಟವಾಗುವ ಸಾಧ್ಯತೆ ಹೆಚ್ಚಿದೆ.
-ಜಯಲಾಲ್‌ ಮತ್ತಿಕಟ್ಟಿ, ಎಳನೀರಿನ ವ್ಯಾಪಾರಿ

Write A Comment