ಮನೋರಂಜನೆ

ನಾನು ಹುಬ್ಬಳ್ಳಿ ಮಣ್ಣಿನವಳು, ರೊಟ್ಟಿ ತಿಂದು ಬೆಳೆದವಳು: ಮಯೂರಿ

Pinterest LinkedIn Tumblr

ಅಮಿತ್ ಎಂ.ಎಸ್.
crec08Mayuri. ಸೋಲುಗಳು ಎದುರಾದರೆ ಹೆದರಿ ಓಡುವವಳಲ್ಲ’ ಎನ್ನುವ ಮಯೂರಿ ಅವರ ಮಾತುಗಳಲ್ಲಿ ‘ಸೋಲುವ ಮಾತೇ ಇಲ್ಲ’ ಎನ್ನುವ ಆತ್ಮವಿಶ್ವಾಸ ಸ್ಪಷ್ಟವಾಗಿದೆ.
‘ಕೃಷ್ಣಲೀಲಾ’ ಚಿತ್ರದ ಸವಾಲಿನ ಪಾತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ದ ಬೆಡಗಿ ಮಯೂರಿ, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಷ್ಟಕಾಮ್ಯ’ ಮತ್ತು ಪವನ್ ಒಡೆಯರ್ ನಿರ್ದೇಶನದ ‘ನಟರಾಜ ಸರ್ವಿಸ್‌’ ಚಿತ್ರಗಳಿಂದ ವಿಭಿನ್ನ ಜಾಡನ್ನು ತುಳಿಯುವ ಸೂಚನೆ ನೀಡಿದ್ದಾರೆ.
ಮಾತು ಮಯೂರಿ ಅವರ ಬಂಡವಾಳ. ಒಂದು ಕಾಲಕ್ಕೆ ‘ಮಾತು’ ಬದುಕು ನೀಡಿದ ವೃತ್ತಿಯೂ ಹೌದು. ಶಾಲೆಯ ಫೀಸ್‌ ಕಟ್ಟಲು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಮಯೂರಿ, ಈಗ ಅವಕಾಶಗಳ ಸಾಗರವೇ ಎದುರಿಗಿದ್ದರೂ ಬಹು ಎಚ್ಚರಿಕೆಯಿಂದ ಒಂದೊಂದಾಗಿ ಹೆಕ್ಕಿ ಆಯ್ದುಕೊಳ್ಳುತ್ತಿದ್ದಾರೆ.
ಈ ವಿಚಾರದಲ್ಲಿ ಮಯೂರಿ ಮಾತೃವಾಕ್ಯ ಪರಿಪಾಲಕಿ. ‘ನಮ್ಮ ನಡಿಗೆ ನಿಧಾನವಾಗಿದ್ದರೂ ಅದರ ಗುರುತು ಶಾಶ್ವತವಾಗಿರಬೇಕು’ ಎಂಬ ಅಮ್ಮನ ಕಿವಿಮಾತನ್ನು ಗಂಭೀರವಾಗಿ ತೆಗೆದುಕೊಂಡವರು.
‘ಅಶ್ವಿನಿ ನಕ್ಷತ್ರ’ ಶುರುವಾದಾಗಲೇ ನೆರೆಯ ಭಾಷೆಗಳಿಲೂ ಸಿನಿಮಾ ಆಹ್ವಾನ ಬಂದಿದ್ದವು. ಆದರೆ ಅವಕಾಶಗಳನ್ನು ಬಾಚಿಕೊಳ್ಳಬೇಕೆಂಬ ತರಾತುರಿಯಲ್ಲಿ ಯಾಮಾರದೆಯೇ ತಾಳ್ಮೆಯಿಂದ ಕಾದೆ. ‘ಕೃಷ್ಣಲೀಲಾ’ದಂತಹ ಸಿನಿಮಾ ಸಿಕ್ಕಿತು ಎನ್ನುತ್ತಾರೆ ಮಯೂರಿ.
ಪ್ರತಿಭೆ ತೋರಲು ಸೂಕ್ತ ಕಥೆ, ನಿರ್ದೇಶಕ ಮತ್ತು ನಿರ್ಮಾಪಕರು ದೊರಕಬೇಕು. ಅದಕ್ಕಾಗಿ ಕಾಯುತ್ತೇನೆ. ಒಳ್ಳೆತನವುಳ್ಳವರಿಗೆ ಮೋಸವಾಗುವುದಿಲ್ಲ. ನಾನೂ ಒಳ್ಳೆಯತನದಿಂದ ಬದುಕುತ್ತಿದ್ದೇನೆ. ನಿಧಾನವಾಗಿ ಮುಂದೆ ಬೆಳೆಯುತ್ತೇನೆ ಎನ್ನುತ್ತಾರೆ ಅವರು.
ವಿಭಿನ್ನ ಪಾತ್ರಗಳು
ನಾಗತಿಹಳ್ಳಿ ಅವರ ‘ಇಷ್ಟಕಾಮ್ಯ’ದಲ್ಲಿ ಮಯೂರಿ ‘ಅಚ್ಚರಿ’ ಎಂಬ ಹೆಸರಿನ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹವ್ಯಕ ಭಾಷೆ ಮಾತನಾಡುವ ಅಪ್ಪಟ ಮಲೆನಾಡ ಯುವತಿಯ ಪಾತ್ರವದು. ಅಪ್ಪನಿಲ್ಲದ, ಬೇಜವಾಬ್ದಾರಿ ಅಣ್ಣನಿರುವ, ಬದುಕು ಸಾಗಿಸಲು ಹೆಣಗಾಡುವ ಅಮ್ಮನ ಜತೆ ಸಂಸಾರ ಸಾಗಿಸುವ ಹೊಣೆ ಹೊತ್ತುಕೊಳ್ಳುವ ಆಕೆ, ವೈದ್ಯನೊಬ್ಬನೊಂದಿಗೆ ಪ್ರೀತಿಯಲ್ಲಿ ಬೀಳುವ ಕಥೆಯಿದು.
ಅಭಿನಯಕ್ಕೆ ದೊರಕಿರುವ ಅವಕಾಶದ ಜತೆ, ಅದ್ಭುತವೆನಿಸುವ ಸಂಭಾಷಣೆಗಳು ಅವರಿಗೆ ರೋಮಾಂಚನ ಹುಟ್ಟಿಸುವ ಅನುಭವ ನೀಡಿದೆಯಂತೆ. ಭಾವುಕತೆ ಹೆಚ್ಚಿರುವ ಈ ಪಾತ್ರದಲ್ಲಿ ನವರಸಗಳೂ ತುಂಬಿವೆಯಂತೆ. ಇದು ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಕನೆಕ್ಟ್‌ ಆಗುವಂತಿದೆ ಎಂದು ಅವರು ಹೇಳುತ್ತಾರೆ.
ಪಾತ್ರದಲ್ಲಿನ ತೀವ್ರತೆಯ ಕಾರಣ ಅವರಿಗೆ ಅರಿವಿಲ್ಲದಂತೆಯೇ ಅದರೊಳಗೆ ಮುಳುಗಿ ಹೋಗಿದ್ದರಂತೆ. ಇದು ತಮ್ಮೊಬ್ಬರ ಅನುಭವವಲ್ಲ, ಚಿತ್ರತಂಡದ ಎಲ್ಲರೂ ಅಷ್ಟು ಇನ್ವಾಲ್ವ್‌ ಆಗಿದ್ದರು. ಸಿನಿಮಾದ ಕಥೆ ಮತ್ತು ಸಂಭಾಷಣೆಯಲ್ಲಿ ಅಷ್ಟು ತೂಕವಿದೆ. 50 ದಿನ ನಿರಂತರವಾಗಿ ಚಿತ್ರೀಕರಣ ಮಾಡಿದ್ದರಿಂದ ಅದೇ ಹೊಸ ಜಗತ್ತಾಗಿ ಪರಿಣಮಿಸಿತ್ತು ಎನ್ನುತ್ತಾರೆ ಮಯೂರಿ.
‘ನಟರಾಜ ಸರ್ವಿಸ್‌’ ಚಿತ್ರದಲ್ಲಿ ಅವರು ಶರಣ್‌ಗೆ ನಾಯಕಿ. ಬೇರೆ ಬೇರೆ ಖಂಡಗಳ, ಚೈನೀಸ್‌, ಭಾರತೀಯ ಆಹಾರಗಳೆಲ್ಲವನ್ನೂ ಒಂದೇ ಕಡೆ ತಂದಿಟ್ಟರೆ ಹೇಗಿರುತ್ತದೆಯೋ ಹಾಗಿದೆ ಈ ಸಿನಿಮಾ ಎನ್ನುವುದು ಅವರು ನೀಡುವ ವಿಶಿಷ್ಟ ಹೋಲಿಕೆ. ನಿಜ ಜೀವನದಲ್ಲಿ ತುಂಬಾ ಹ್ಯೂಮರಸ್‌ ಆಗಿರುವ ಅವರು ಶರಣ್‌ ಅಭಿನಯವನ್ನು ನೋಡುತ್ತ ಬೆಳೆದವರು.
ಆದರೆ ತಮ್ಮ ಪಾತ್ರ ತುಸು ಗಂಭೀರವಾಗಿರುವುದರಿಂದ ಶರಣ್ ಅವರೆದುರು ನಟಿಸುವುದು ಬಹಳ ಕಷ್ಟವಾಗಿದೆಯಂತೆ. ಶರಣ್‌ ತಮಾಷೆ ಮಾಡಿದಾಗ ಕೋಪ ಪ್ರದರ್ಶಿಸಬೇಕು. ಅವರ ಸಿನಿಮಾಗಳನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದವರು, ಲೈವ್‌ನಲ್ಲಿ ಡೈಲಾಗ್‌ಗಳನ್ನು ಕೇಳಿದಾಗ ನಗದೆ ಇರಲಾಗುತ್ತದೆಯೇ? ನಗದೆ ಕೋಪದಿಂದ ವರ್ತಿಸುವುದು ಸುಲಭವಾಗಿರಲಿಲ್ಲ ಎಂಬ ಅನುಭವ ಹಂಚಿಕೊಳ್ಳುತ್ತಾರೆ. ಮಾತು ಮತ್ತು ನಗು ಅವರ ಬದುಕಿನ ಎರಡು ಪ್ರಿಯವಾದ ಸಂಗತಿಗಳಂತೆ.
ಇದರ ನಡುವೆ ಮಯೂರಿ ತೆಲುಗಿನಲ್ಲಿಯೂ ಪಯಣಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಬಹುತೇಕ ಚಿತ್ರೀಕರಣ ಮುಕ್ತಾಯಗೊಳಿಸಿದೆ. ಹೈದರಾಬಾದ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ನೈಜ ಘಟನೆ ಆಧರಿಸಿದ ಚಿತ್ರವದು. ಈ ಪಾತ್ರವನ್ನು ಒಪ್ಪಿಕೊಳ್ಳುವಾಗ ಅವರು ಕೊಂಚ ಅನುಮಾನಿಸಿದ್ದರಂತೆ. ಆದರೆ ಕಥೆ ಸಿನಿಮಾವನ್ನು ಒಲ್ಲೆ ಎನ್ನಲು ಬಿಡಲಿಲ್ಲ.
ಮಾತು–ಬದುಕು
ಚಿಕ್ಕ ವಯಸ್ಸಿನಿಂದಲೂ ಬೇವು ತಿಂದಿದ್ದೇ ಹೆಚ್ಚು, ಬೆಲ್ಲ ತೀರಾ ಕಡಿಮೆ ಎಂದು ತಮ್ಮ ಬದುಕಿನ ಸಂಕಷ್ಟದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಇಬ್ಬರು ಹೆಣ್ಣುಮಕ್ಕಳನ್ನು ಓದಿಸಲು ತಂದೆ ಪಡುತ್ತಿದ್ದ ಶ್ರಮ ಅವರ ನೆನಪಿನಿಂದ ಮಾಸಿಲ್ಲ. ಕಷ್ಟಗಳ ಕಾರಣ ಮಯೂರಿ ಆಗಲೇ ದುಡಿಯುವ ಸಾಹಸಕ್ಕೆ ಕೈ ಹಾಕಿದ್ದರು. ‘ಚಿಕ್ಕ ವಯಸ್ಸು ನಿಂದು.
ಈಗಲೇ ವಯಸ್ಸಾದವರಂತೆ ಮಾತನಾಡುತ್ತೀಯಾ, ಯೋಚಿಸುತ್ತೀಯಾ’ ಎಂದು ಅವರ ತಂದೆ ಹೇಳುತ್ತಿದ್ದರಂತೆ. ಆ ಪ್ರಬುದ್ಧತೆ ಈಗ ಹೆಚ್ಚು ಪ್ರಯೋಜನಕ್ಕೆ ಬರುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಛಾತಿ ಅವರಲ್ಲಿ ಬೆಳೆದಿದೆ.
ಆಗ ಒಬ್ಬರೂ ಹತ್ತಿರ ಬರುತ್ತಿರಲಿಲ್ಲ. ಯಶಸ್ಸು ಬಂದಾಗ ನೂರಾರು ಜನರು ಸಲಹೆ ನೀಡಲು ಬರುತ್ತಾರೆ. ಆದರೆ ನನ್ನ ಮನಸು ಏನು ಹೇಳುತ್ತದೆಯೋ ಅದನ್ನೇ ಮಾಡುತ್ತೇನೆ ಎನ್ನುವ ಮಯೂರಿಗೆ ಹಿರಿಯ ಕಲಾವಿದರೇ ಸ್ಫೂರ್ತಿಯಂತೆ. ಹಿಂದಿನ ಕಾಲದಲ್ಲಿ ನಾಯಕಿ ಪ್ರಧಾನ ಚಿತ್ರವಲ್ಲದಿದ್ದರೂ, ಕೆಲವು ನಟಿಯರಿಗಾಗಿಯೇ ಸಂಭಾಷಣೆಗಳನ್ನು ಬರೆಯುತ್ತಿದ್ದುದನ್ನು, ಸನ್ನಿವೇಶ ಸೃಷ್ಟಿಸುತ್ತಿದ್ದುದನ್ನು ಅವರು ಕೇಳಿದ್ದಾರೆ. ಚಿತ್ರರಂಗದಲ್ಲಿ ತಮ್ಮನ್ನು ದೃಷ್ಟಿಯಲ್ಲಿಟ್ಟುಕೊಂಡು ಸನ್ನಿವೇಶ, ಸಂಭಾಷಣೆ ಬರೆಯುವ ಗಳಿಗೆ ಬರಬೇಕೆನ್ನುವುದು ಅವರ ಅದಮ್ಯ ಆಸೆ.
‘ಯಾವ ಪಾತ್ರವಾದರೂ ಶೇ 100ರಷ್ಟು ಶ್ರಮ ಹಾಕುತ್ತೇನೆ. ಪಾತ್ರದ ಒಳಹೊಕ್ಕಲು ಪ್ರಯತ್ನಿಸುತ್ತೇನೆ. ನನ್ನ ಸುತ್ತಮುತ್ತಲೂ ನನಗಿಂತಲೂ ನೂರಾರು ಮಂದಿ ಚೆನ್ನಾಗಿರುವವರು ಇರಬಹುದು. ಆದರೆ ನಾನೇ ಎಲ್ಲರಿಗಿಂತ ಬೆಸ್ಟ್ ಎಂದುಕೊಳ್ಳುತ್ತೇನೆ. ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತೇನೆ. ಅದೇ ನನಗೆ ಪ್ಲಸ್‌ ಪಾಯಿಂಟ್‌. ಅದು ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತದೆ’ ಎಂದು ಹೇಳುತ್ತಾರೆ.
ಒಮ್ಮೆ ಒಟ್ಟಿಗೆ ಊಟ ಮಾಡುವಾಗ ನಾಗತಿಹಳ್ಳಿ ಅವರು, ‘ನೀನು ತುಂಬಾ ಎತ್ತರಕ್ಕೆ ಬೆಳೆಯುತ್ತೀಯಾ. ನಾನು ಇಂದು ಹೇಳಿದ್ದನ್ನು ಅಂದು ನೆನಪಿಸಿಕೊಳ್ಳುತ್ತೀಯಾ’ ಎಂದಿದ್ದರಂತೆ. ಅದಕ್ಕಿಂತಲೂ ಇನ್ನೇನು ಬೇಕು ಎಂಬ ಧನ್ಯತೆ ಅವರದು. ಯಾರು ಮೆಚ್ಚಿದರೂ, ತೆಗಳಿದರೂ, ಒಳ್ಲೆಯ ಹೆಸರು ಮಾಡುವ ಮತ್ತು ಹಾಳು ಮಾಡಿಕೊಳ್ಳುವ ಎರಡೂ ಸಾಧ್ಯತೆಗಳು ನಮ್ಮ ಕೈಯಲ್ಲೇ ಇರುತ್ತದೆ ಎನ್ನುತ್ತಾರೆ.
ಮುಂದೆ ಸಿನಿಮಾದಾಚೆಗೂ ಚಟುವಟಿಕೆಗಳನ್ನು ವಿಸ್ತರಿಸುವ ಹಂಬಲ ಹೊಂದಿರುವ ಮಯೂರಿ– ‘ಸದ್ಯಕ್ಕೆ ತಾಳ್ಮೆಯ, ಜಾಗರೂಕತೆಯ ನಡಿಗೆ’ ನನ್ನದು ಎನ್ನುತ್ತಾರೆ.

Write A Comment