ಕರ್ನಾಟಕ

ಕ್ಷುಲ್ಲಕ ವಿಚಾರಕ್ಕೆ ಪೈಂಟರ್‌ನನ್ನು ಇರಿದು ಕೊಂದ ಸಹಚರರು

Pinterest LinkedIn Tumblr

murderಬೆಂಗಳೂರು, ಏ.9- ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ಮಾಡಿದ ಪೈಂಟರ್‌ನನ್ನು ಕಾರಿನಲ್ಲಿ ಕರೆದೊಯ್ದು ಇರಿದು ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೀರೇಶನಗರ ವಾಸಿ ಮಾದೇಶ (25) ಕೊಲೆಯಾದ ಪೈಂಟರ್. ರಾತ್ರಿ ಮನೆಯ ಹೊರಗೆ ಮಾದೇಶ ಕುಳಿತಿದ್ದಾಗ ಪಕ್ಕದ ಬೀದಿಯ ಪುನೀತ ಅಲ್ಲಿಗೆ ಬಂದಿದ್ದಾನೆ. ಇಲ್ಲಿಗೇಕೆ ಬಂದೆ ಎಂದು ಪ್ರಶ್ನಿಸಿದ ಮಾದೇಶ ಮಾತಿನ ಚಕಮಕಿ ನಡೆಸಿ ಪುನೀತನ ಮೇಲೆ ಹಲ್ಲೆ ಮಾಡಿದ್ದಾನೆ. ವಾಪಸ್ ತೆರಳಿದ ಪುನೀತ ಸ್ನೇಹಿತ ಶಿವಕುಮಾರ್‌ನೊಂದಿಗೆ ಬಂದು ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದಾಗ ಮಾದೇಶ ಮತ್ತೆ ಶಿವಕುಮಾರನಿಗೂ ಹಲ್ಲೆ ಮಾಡಿದ್ದಾನೆ.

ಸ್ಥಳದಿಂದ ತೆರಳಿದ ಪುನೀತ ಮತ್ತು ಶಿವಕುಮಾರ ಇನ್ನೂ ಐವರು ಸಹಚರರೊಂದಿಗೆ ರಾತ್ರಿ 11 ಗಂಟೆಗೆ ಮಾದೇಶನ ಬಳಿಗೆ ಬಂದು ಮಾತನಾಡಬೇಕೆಂದು ಕಾರಿನಲ್ಲಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಮೂವರು ಕಾರಿನಿಂದ ಇಳಿದು ಹೋಗಿದ್ದು, ಉಳಿದ ನಾಲ್ವರು ಮಾದೇಶನನ್ನು ಕಾರಿನಲ್ಲೇ ಸುತ್ತಾಡಿಸಿ ಹಲ್ಲೆ ಮಾಡಿ ಚಾಕುವಿನಿಂದ ಕಿಬ್ಬೊಟ್ಟೆ, ಕುತ್ತಿಗೆಗೆ ಇರಿದಿದ್ದಾರೆ. ಇರಿತದಿಂದಾಗಿ ತೀವ್ರ ರಕ್ತಸ್ರಾವದಿಂದ ಮಾದೇಶ ಮೃತಪಟ್ಟಿದ್ದು, ಇದರಿಂದ ಗಾಬರಿಗೊಂಡ ನಾಲ್ವರು ಚುಂಚನಘಟ್ಟ ಸಮೀಪ ಮರವೊಂದರ ಕೆಳಗೆ ಶವ ಮಲಗಿಸಿ ಹೋಗಿದ್ದಾರೆ.

ತಾವೇ ಮಾದೇಶನನ್ನು ಕರೆತಂದ ವಿಚಾರ ಮನೆಯವರಿಗೂ ಗೊತ್ತಿದೆ ಎಂದು ಹೆದರಿ ನಾಲ್ವರು ಸುಬ್ರಮಣ್ಯಪುರ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ. ವಿಚಾರ ತಿಳಿದು ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆ ಮಾಡಿರುವ ನಾಲ್ವರು ಆರೋಪಿಗಳಾದ ಶಿವಕುಮಾರ, ಪುನೀತ, ಭರತ್ ಮತ್ತು ಸಚಿನ್ ಎಂಬುವರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ಜತೆಗಿದ್ದು, ಕಾರ್‌ನಿಂದ ಇಳಿದು ಹೋಗಿದ್ದ ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಅವರ ಪಾತ್ರ ಕುರಿತು ತನಿಖೆ ನಡೆಸುತ್ತಿರುವುದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಡಿಸಿಪಿ ಲೋಕೇಶ್ವರ್ ತಿಳಿಸಿದ್ದಾರೆ.

Write A Comment